ತಿರುವನಂತಪುರ: ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುತ್ತಿರುವ ಬೆನ್ನಲ್ಲೇ, ಇತ್ತ ಕೇರಳ ಸರ್ಕಾರವು ಬಂಡೀಪುರ (Bandipur) ರಕ್ಷಿತಾರಣ್ಯದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕರ್ನಾಟಕಕ್ಕೆ ಒತ್ತಾಯಿಸಿದೆ. ಈ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳದ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆಗೆ ಸಜ್ಜಾಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾರಿಯಲ್ಲಿರುವ ರಾತ್ರಿ ಸಂಚಾರ ನಿಷೇಧವನ್ನು ಹಿಂಪಡೆಯುವಂತೆ ಈ ಹಿಂದೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ kooda ಮನವಿ ಮಾಡಿದ್ದರು. ಪ್ರಸ್ತುತ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಇರುವುದರಿಂದ, ಈ ನೆನೆಗುದಿಗೆ ಬಿದ್ದಿರುವ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಕೇರಳ ಸರ್ಕಾರವಿದೆ.
ಈ ಕುರಿತು ಕೇರಳದ ಪ್ರಮುಖ ನಾಯಕರಾದ ವಿ.ಡಿ. ಸತೀಶನ್ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಯತ್ನಕ್ಕೆ ಪ್ರಿಯಾಂಕಾ ಗಾಂಧಿ ಅವರ ಬೆಂಬಲವೂ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಶಾಶ್ವತ ಪರಿಹಾರದ ಭರವಸೆ: ಈಗಾಗಲೇ ಕೇರಳದ ಹಿರಿಯ ಸಂಸದ ರಾಘವನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದು, ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ವನ್ಯಜೀವಿಗಳಿಗೆ ತೊಂದರೆಯಾಗದಂತೆ ಮೇಲ್ಸೇತುವೆ (Flyover) ನಿರ್ಮಾಣ ಮಾಡುವಂತಹ ಶಾಶ್ವತ ಪರಿಹಾರಗಳ ಬಗ್ಗೆ ಕೇರಳ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
