ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ (MP B.Y. Raghavendra) ಅವರು ಸಂಚರಿಸುತ್ತಿದ್ದ ಕಾರಿಗೆ ಇಂದು ಮಧ್ಯಾಹ್ನ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದಿದೆ. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಬಳಿ ಈ ಘಟನೆ ಸಂಭವಿಸಿದ್ದು, ಸಂಸದರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.
ಘಟನೆ ನಡೆದದ್ದು ಹೇಗೆ?
ಸಂಸದ ಬಿ.ವೈ. ರಾಘವೇಂದ್ರ ಅವರು ಶಿಕಾರಿಪುರದಿಂದ ಸವಳಂಗ ರಸ್ತೆ ಮಾರ್ಗವಾಗಿ ಶಿವಮೊಗ್ಗದತ್ತ ಮಧ್ಯಾಹ್ನ ಸುಮಾರು 12:30ಕ್ಕೆ ಬರುತ್ತಿದ್ದರು. ರಸ್ತೆಯ ಹಂಪ್ (ವೇಗ ನಿಯಂತ್ರಕ) ಬಂದ ಕಾರಣ ಸಂಸದರ ಎಸ್ಕಾರ್ಟ್ ವಾಹನ ಹಾಗೂ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ವೇಗ ತಗ್ಗಿಸಿವೆ.
ಇದೇ ವೇಳೆ ವೇಗವಾಗಿ ಬಂದ ಬೊಲೆರೋ ವಾಹನವೊಂದು ನಿಯಂತ್ರಣ ತಪ್ಪಿ ಸಂಸದರ ಕಾರಿನ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಂಸದರ ವಾಹನದ ಮುಂದಿನ ಮತ್ತು ಹಿಂದಿನ ಭಾಗಗಳು ನುಜ್ಜುಗುಜ್ಜಾಗಿವೆ.
ಅದೃಷ್ಟವಶಾತ್, ಕಾರಿನಲ್ಲಿದ್ದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅವರ ಕಚೇರಿ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಘಾತದ ನಂತರ ಸಂಸದರು ಪೊಲೀಸ್ ಎಸ್ಕಾರ್ಟ್ ವಾಹನದಲ್ಲೇ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.
