S Shorts

SSLCಯಲ್ಲಿ 28 ಅಂಕ ಬಂದಿದ್ದ ವಿದ್ಯಾರ್ಥಿಗೆ ಸ್ಕ್ಯಾನ್ ಕಾಪಿಯಲ್ಲಿ ಸಿಕ್ಕಿತು 72 ಅಂಕ!

SSLCಯಲ್ಲಿ 28 ಅಂಕ ಬಂದಿದ್ದ ವಿದ್ಯಾರ್ಥಿಗೆ ಸ್ಕ್ಯಾನ್ ಕಾಪಿಯಲ್ಲಿ ಸಿಕ್ಕಿತು 72 ಅಂಕ!
Author: Savina Naik
Posted By: Savina Naik
Updated: Apr 27, 2026 | 12:20 PM

ಚಿಕ್ಕಮಗಳೂರು:  ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ  ಕೇವಲ 28 ಅಂಕಗಳನ್ನು ಕಂಡು ಕಂಗಾಲಾಗಿದ್ದ ವಿದ್ಯಾರ್ಥಿಯೊಬ್ಬನಿಗೆ, ಸ್ಕ್ಯಾನ್ ಕಾಪಿ ಬಂದಾಗ ಬರೋಬ್ಬರಿ 72 ಅಂಕಗಳು ಬಂದಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರಿನ ಶೃಂಗೇರಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ರಾಮದತ್ತ ಶರ್ಮಾ ಇಂಗ್ಲಿಷ್‌ನಲ್ಲಿ 28 ಅಂಕ ಪಡೆದು ಕಂಗಾಲಾಗಿದ್ದ. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಗೆ ಇಷ್ಟು ಕಡಿಮೆ ಅಂಕ ಬಂದಿದ್ದನ್ನು ನೋಡಿ ವಿದ್ಯಾರ್ಥಿ ಹಾಗೂ ಪೋಷಕರು ಅಕ್ಷರಶಃ ಕಂಗಾಲಾಗಿದ್ದರು.  ಕೂಡಲೇ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಶಿಕ್ಷಕರು, ಸ್ಕ್ಯಾನ್ ಕಾಪಿ (Scan Copy) ಬರುವವರೆಗೂ ತಾಳ್ಮೆಯಿಂದ ಇರುವಂತೆ ವಿದ್ಯಾರ್ಥಿಗೆ ಧೈರ್ಯ ತುಂಬಿದ್ದರು.

ಶಿಕ್ಷಕರ ಮಾರ್ಗದರ್ಶನದಂತೆ ರಾಮದತ್ತ ಇಂಗ್ಲಿಷ್ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗಾಗಿ ಅರ್ಜಿ ಸಲ್ಲಿಸಿದ್ದನು. ಇಂದು ಸ್ಕ್ಯಾನ್ ಕಾಪಿ ಕೈಗೆ ಬಂದಾಗ ಪರೀಕ್ಷಾ ಮಂಡಳಿಯ ಮತ್ತು ಕಂಪ್ಯೂಟರ್ ಆಪರೇಟರ್‌ನ ಮಹಾನ್ ಎಡವಟ್ಟು ಬಯಲಾಗಿದೆ. ಉತ್ತರ ಪತ್ರಿಕೆಯಲ್ಲಿ ರಾಮದತ್ತನಿಗೆ 72 ಅಂಕಗಳು ಬಂದಿವೆ. ಆದರೆ, ಕಂಪ್ಯೂಟರ್‌ನಲ್ಲಿ ಅಂಕಗಳನ್ನು ನಮೂದಿಸುವಾಗ ಆಪರೇಟರ್ ಮಾಡಿದ ತಪ್ಪು ತಿದ್ದುಪಡಿಯಿಂದ ಕೇವಲ 28 ಅಂಕಗಳು ಮಾತ್ರ ದಾಖಲಾಗಿದ್ದವು.

ಶಿಕ್ಷಕರ ಧೈರ್ಯದ ಮೇರೆಗೆ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ಪಡೆದಾಗ, ಆತನಿಗೆ ನಿಜವಾಗಿ 72 ಅಂಕ ಬಂದಿರುವುದು ದೃಢಪಟ್ಟಿದೆ. ಪರೀಕ್ಷಾ ಮಂಡಳಿಯು ಅಂಕಗಳನ್ನು ದಾಖಲಿಸುವಾಗ ಇನ್ನಷ್ಟು ಜಾಗರೂಕತೆ ವಹಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.