ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಈ ವೇಳೆ ರಾಜ್ಯಪಾಲರ ನಡವಳಿಕೆ, ಕೇಂದ್ರ ಸರ್ಕಾರದ ಅನುದಾನ ತಾರತಮ್ಯ ಮತ್ತು ಜಿಎಸ್‌ಟಿ ನಷ್ಟದ ಕುರಿತು ಸಿಎಂ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಭಾಷಣವನ್ನು ಪೂರ್ತಿ ಓದದೆ ತರಾತುರಿಯಲ್ಲಿ ನಿರ್ಗಮಿಸಿದ್ದು, ‘ಜೈ ಸಂವಿಧಾನ’ ಎಂದು ಉಲ್ಲೇಖಿಸದೆ ಇರುವುದು ಸರಿಯಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ಅವರು ಕಾಯಬೇಕಿತ್ತು. ಸಂವಿಧಾನದ ಆರ್ಟಿಕಲ್ 176ರ ಪ್ರಕಾರ, ಜಂಟಿ ಅಧಿವೇಶನ ನಡೆದುಕೊಂಡು ಬರುತ್ತಿರುವುದು ಸಂವಿಧಾನಬದ್ಧ ಪದ್ಧತಿಯಾಗಿದೆ. ಜನವರಿ 23ರ ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳೂ ರಾಜ್ಯಪಾಲರ ನಡವಳಿಕೆಯನ್ನು ಖಂಡಿಸಿವೆ ಎಂದು ಸಿಎಂ ಉಲ್ಲೇಖಿಸಿದರು. ನಾವು ರಾಜ್ಯಪಾಲರ ವ್ಯಕ್ತಿತ್ವದ ವಿರುದ್ಧವಲ್ಲ, ಆದರೆ ಅವರ ಈ ನಡೆ ರಾಜಕೀಯ ಏಜೆಂಟ್‌ನಂತೆ ಭಾಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ಅಸಹಾಯಕ ಮುಖ್ಯಮಂತ್ರಿ’ ಹೇಳಿಕೆಗೆ ತಿರುಗೇಟು:
ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು “ಅಸಹಾಯಕ ಮುಖ್ಯಮಂತ್ರಿ” ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಕೆಲವು ಬಾರಿ ಅಸತ್ಯದ ಎದುರು ಸತ್ಯ ಅಸಹಾಯಕವಾಗಿಬಿಡುತ್ತದೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ:
ಮನರೇಗಾ ಯೋಜನೆಯನ್ನು ಬದಲಾಯಿಸಿ “ವಿಬಿ ಜಿ ರಾಮ್ ಜಿ” ಎಂದು ಹೆಸರಿಸಿರುವುದನ್ನು ಸಿಎಂ ಟೀಕಿಸಿದರು. “ಇದರಲ್ಲಿರುವ ರಾಮ, ದಶರಥ ರಾಮನೂ ಅಲ್ಲ, ಅಯೋಧ್ಯೆ ರಾಮನೂ ಅಲ್ಲ. ಕೇವಲ ಹೆಸರು ಬದಲಾಯಿಸುವುದಕ್ಕಾಗಿಯೇ ಇಂತಹ ಕಸರತ್ತು ನಡೆಯುತ್ತಿದೆ. ಈ ಹೊಸ ಕಾಯ್ದೆಯಲ್ಲಿ ‘ಗ್ರಾಮ’ ಎಂಬ ಪದವೇ ಇಲ್ಲ” ಎಂದು ವ್ಯಂಗ್ಯವಾಡಿದರು.
ಜಿಎಸ್‌ಟಿ ಮತ್ತು ಅನುದಾನ ತಾರತಮ್ಯದ ಲೆಕ್ಕಾಚಾರ:
- 2022 ರಿಂದ ರಾಜ್ಯಕ್ಕೆ ಪ್ರತಿ ವರ್ಷ 18-20 ಸಾವಿರ ಕೋಟಿ ರೂ. ಜಿಎಸ್‌ಟಿ ನಷ್ಟವಾಗುತ್ತಿದೆ. 2020-25ರ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು 2 ಲಕ್ಷ ಕೋಟಿ ರೂ. ನಷ್ಟವಾಗಿದೆ.
- 14ನೇ ಆಯೋಗದಲ್ಲಿ ರಾಜ್ಯಕ್ಕೆ 4.71% ತೆರಿಗೆ ಪಾಲು ಸಿಗುತ್ತಿತ್ತು. ಆದರೆ 15ನೇ ಆಯೋಗದಲ್ಲಿ ಇದನ್ನು 3.64%ಕ್ಕೆ ಇಳಿಸಿದ್ದರಿಂದ ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ. ನಷ್ಟವಾಗಿದೆ.
- 16ನೇ ಆಯೋಗವು ಕೇವಲ 4.131% ಮಾತ್ರ ಶಿಫಾರಸು ಮಾಡಿದೆ. ರಾಜ್ಯಕ್ಕೆ ಶೇ. 50 ತೆರಿಗೆ ಪಾಲು ಸಿಗಬೇಕೆಂಬ ಬೇಡಿಕೆ ಈಡೇರಿಲ್ಲ.
- ಕೇಂದ್ರ ಸರ್ಕಾರ ಸೆಸ್ ಮತ್ತು ಸರ್‌ಚಾರ್ಜ್ ಮೂಲಕ 6 ಲಕ್ಷ ಕೋಟಿ ರೂ. ಸಂಗ್ರಹಿಸುತ್ತಿದ್ದರೂ, ಅದರಲ್ಲಿ ರಾಜ್ಯಕ್ಕೆ ಒಂದು ಪೈಸೆಯೂ ಸಿಗುತ್ತಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಎಚ್‌ಡಿಕೆ ವಿರುದ್ಧ ವಾಗ್ದಾಳಿ:
ಹಿಂದೆ ಸಿಎಂ ಆಗಿದ್ದಾಗ ಎಚ್.ಡಿ. ಕುಮಾರಸ್ವಾಮಿ ಅವರು ನರೇಗಾವನ್ನು “ಉದ್ಯೋಗ ಸಂಜೀವಿನಿ” ಎಂದು ಹೊಗಳಿದ್ದರು. ಆದರೆ ಈಗ ಬಿಜೆಪಿ ಜೊತೆ ಸೇರಿ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಕುಟುಕಿದರು.
