S Shorts

‘ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೇಸ್ CBIಗೆ ಕೊಟ್ಟಿದ್ದೀರಾ?’: ಬಳ್ಳಾರಿ ಬ್ಯಾನರ್ ವಿವಾದ, ಬಿಜೆಪಿ ವಿರುದ್ಧ CM ಸಿದ್ದರಾಮಯ್ಯ ಕಿಡಿ

‘ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೇಸ್ CBIಗೆ ಕೊಟ್ಟಿದ್ದೀರಾ?’: ಬಳ್ಳಾರಿ ಬ್ಯಾನರ್ ವಿವಾದ, ಬಿಜೆಪಿ ವಿರುದ್ಧ CM ಸಿದ್ದರಾಮಯ್ಯ ಕಿಡಿ
Author: Sagaradventure
Posted By: Sagaradventure
Updated: Jan 18, 2026 | 9:28 AM

ಮೈಸೂರು: ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಬೇಕೆಂಬ ಬಿಜೆಪಿಯ ಒತ್ತಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಯಾವ ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೀರಿ ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಬಿಜೆಪಿಯವರ ಈ ನಡೆ ನಿಜಕ್ಕೂ ಕಳವಳಕಾರಿ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜಾರ್ಜ್ ಪ್ರಕರಣ ಮತ್ತು ಸೌಜನ್ಯಾ ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದೆ. ಆದರೆ, ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಕರಣವನ್ನಾದರೂ ಸಿಬಿಐಗೆ ನೀಡಿದೆಯೇ ಎಂಬುದನ್ನು ಮೊದಲು ಹೇಳಲಿ. ಅವರಿಗೆ ಸಿಬಿಐ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ?” ಎಂದು ನೇರವಾಗಿ ಸವಾಲು ಹಾಕಿದರು. ಅಲ್ಲದೆ, ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ಅವರು ಕೇವಲ ಸರ್ವಾಧಿಕಾರವನ್ನು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ನರೇಗಾ (NREGA) ಯೋಜನೆ ಕುರಿತು ಮಾತನಾಡಿದ ಅವರು, ಬಿಜೆಪಿಯವರು ನಿಯಮಗಳನ್ನು ಬದಲಾಯಿಸುವ ಮೂಲಕ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗಲಿದ್ದು, ಈ ಕುರಿತು ಚರ್ಚಿಸಲು ಶೀಘ್ರದಲ್ಲೇ ವಿಶೇಷ ಅಧಿವೇಶನವನ್ನು ಕರೆಯಲಾಗುವುದು. ಅಲ್ಲಿ ಎಲ್ಲರೊಂದಿಗೂ ಸವಿವರವಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದರು.