ದಾವಣಗೆರೆ: ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ಸಿಂಥೆಟಿಕ್ ಡ್ರಗ್ಸ್ (Drug)ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಅನ್ವರ್ ಪಾಷಾ ಸೇರಿದಂತೆ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಅನ್ವರ್ ಪಾಷಾ ಸಚಿವ ಜಮೀರ್ ಅಹ್ಮದ್ (Zameer Ahmed) ಖಾನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎಂಬುದು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಡ್ರಗ್ಸ್ ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿರುವ ಬೆಂಗಳೂರು ಹೈಕೋರ್ಟ್, ಅನ್ವರ್ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ದಂಧೆಯಲ್ಲಿ ಶಾಮೀಲಾದ ಯಾರನ್ನೂ ಬಿಡುವುದಿಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಜಮೀರ್ ‘ಮುತ್ತು’ ಮತ್ತು ಸ್ನೇಹದ ವಿವಾದ:
ಈ ಹಿಂದೆ ಅನ್ವರ್ ಪಾಷಾ ಮನೆಯ ಮದುವೆ ಸಮಾರಂಭಕ್ಕೆ ತೆರಳಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಪ್ರೀತಿಯಿಂದ ಅನ್ವರ್‌ಗೆ ಮುತ್ತು ನೀಡಿದ್ದರು. ಈ ಫೋಟೋ ಮತ್ತು ವಿಡಿಯೋಗಳು ಈಗ ಡ್ರಗ್ಸ್ ಪ್ರಕರಣದ ಬೆನ್ನಲ್ಲೇ ವೈರಲ್ ಆಗಿವೆ.
ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಜಮೀರ್ ಅಹ್ಮದ್ ಅವರು, ನನಗೆ ಮುತ್ತು ಕೊಡುವುದು ಹಳೆಯ ಅಭ್ಯಾಸ, ಅದು ಪ್ರೀತಿಯ ಸಂಕೇತ. ಆತ ತಪ್ಪು ಮಾಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ನಾನು ಯಾರಿಗೂ ರಕ್ಷಣೆ ಕೊಡುವುದಿಲ್ಲ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ನನ್ನನ್ನು ಅನ್ವರ್ ಮನೆಗೆ ಕರೆದಿದ್ದರು, ಅಂದಿನಿಂದ ಆತ ನನಗೆ ಪರಿಚಯ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ (SS Mallikarjun) ಅವರ ಆಪ್ತರು ಸೇರಿ ಒಟ್ಟು 11 ಜನರ ಬಂಧನವಾಗಿದ್ದು, ನಗರದಲ್ಲಿ ಡ್ರಗ್ಸ್ ಮಾಫಿಯಾದ ಆಳ ಎಷ್ಟಿದೆ ಎಂಬುದು ಬಯಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗದು.
