ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾದ ಬೇರುಗಳನ್ನು ಕಿತ್ತೆಸೆಯಲು ಬೆಂಗಳೂರು ನಗರ ಪೊಲೀಸರು ಸಮರ ಸಾರಿದ್ದಾರೆ. ಕಳೆದ ಒಂದು ವಾರದಿಂದ ನಗರದ ವಿವಿಧೆಡೆ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿರುವ ಪೊಲೀಸರು, ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಬೇಟೆ?
ನಗರದ ವಿವಿಧ ವಿಭಾಗಗಳ ಪೊಲೀಸರು ಹಗಲಿರುಳು ನಡೆಸಿದ ಕಾರ್ಯಾಚರಣೆಯಲ್ಲಿ ಬಾಗಲೂರು ಪೊಲೀಸರು ಸುಮಾರು 16 ಕೋಟಿ ರೂ. ಮೌಲ್ಯದ ಅತೀ ಹೆಚ್ಚು ಕಿಕ್ ನೀಡುವ ಎಲ್ಎಸ್ಡಿ (LSD) ಸ್ಟ್ರಿಪ್ಗಳನ್ನು ಜಪ್ತಿ ಮಾಡಿದ್ದಾರೆ. ಸಿಸಿಬಿ ನಡೆಸಿದ ಭರ್ಜರಿ ದಾಳಿಯಲ್ಲಿ 17.5 ಕೋಟಿ ರೂ. ಮೌಲ್ಯದ ಎಂಡಿಎಂಎ (MDMA) ಕ್ರಿಸ್ಟಲ್ಸ್ ಪತ್ತೆಯಾಗಿದೆ. ಯಶವಂತಪುರ ಮತ್ತು ಜಾಲಹಳ್ಳಿ ಭಾಗಗಳಲ್ಲಿ ನಡೆದ ದಾಳಿಯಲ್ಲಿ 6.47 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಚಿಕ್ಕಜಾಲದಲ್ಲಿ 1.6 ಕೋಟಿ ರೂ. ಮೌಲ್ಯದ ಎಂಡಿಎಂಎ ಹಾಗೂ ಆಡುಗೋಡಿಯಲ್ಲಿ 1.5 ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.
ಯುವಜನತೆಯೇ ಟಾರ್ಗೆಟ್:
ನಗರದ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಬೃಹತ್ ಪ್ರಮಾಣದ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ವಿದೇಶಿ ಮೂಲದ ಪೆಡ್ಲರ್ಗಳು ಮತ್ತು ಅಂತರಾಜ್ಯ ಲಿಂಕ್ಗಳ ಮೇಲೆ ಪೊಲೀಸರು ನಿರಂತರ ನಿಗಾ ವಹಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ನಡೆದಿರುವ ಈ ಕಾರ್ಯಾಚರಣೆಯು ಡ್ರಗ್ಸ್ ಮಾಫಿಯಾಕ್ಕೆ ದೊಡ್ಡ ಮಟ್ಟದ ಎಚ್ಚರಿಕೆಯ ಸಂದೇಶ ರವಾನಿಸಿದೆ.
