ಬಳ್ಳಾರಿ : ಬಿಜೆಪಿ ಹಿರಿಯ ಮುಖಂಡ ಬಿ. ಶ್ರೀರಾಮುಲು (B Sriramulu) ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಕ್ಸೋ (POCSO) ಪ್ರಕರಣವೊಂದರ ಸಂತ್ರಸ್ತೆಯ ಹೆಸರು ಮತ್ತು ವಿಳಾಸವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಜನವರಿ 17ರಂದು ಬಳ್ಳಾರಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ ಶ್ರೀರಾಮುಲು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಬಳ್ಳಾರಿಯು ಗಾಂಜಾ ಮತ್ತು ಡ್ರಗ್ಸ್ ಹಬ್ ಆಗಿ ಬದಲಾಗಿದೆ ಎಂದು ಕಿಡಿಕಾರಿದ್ದ ಅವರು, ಡ್ರಗ್ಸ್ ಸೇವಿಸಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದರು.
ಈ ಸಂದರ್ಭದಲ್ಲಿ ಸಂತ್ರಸ್ತೆಯ ಹೆಸರು, ಆಕೆಯ ವಿಳಾಸ, ಓದುತ್ತಿರುವ ತರಗತಿ ಹಾಗೂ ಶಾಲೆಯ ಹೆಸರನ್ನು ಕೂಡ ಶ್ರೀರಾಮುಲು ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.
ಕಾನೂನಿನ ಪ್ರಕಾರ, ಅತ್ಯಾಚಾರ ಅಥವಾ ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಂತ್ರಸ್ತೆಯ ಘನತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಆದರೆ ಈ ಯಾವುದೇ ನಿಯಮವನ್ನು ಪಾಲಿಸದೆ ಇರುವುದಕ್ಕೆ, ಇದನ್ನು ಗಂಭೀರ ಲೋಪವೆಂದು ಪರಿಗಣಿಸಿ ಬಳ್ಳಾರಿ ಮಹಿಳಾ ಪೊಲೀಸರು ಶ್ರೀರಾಮುಲು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
