ಬೆಂಗಳೂರು: ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ. 2028ರ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯುವುದು ಖಚಿತ ಎಂದು ಸ್ವತಃ ಕುಮಾರಸ್ವಾಮಿ ಅವರೇ ಸಂಕ್ರಾಂತಿ ಹಬ್ಬದ ದಿನ ಘೋಷಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ತಾವು ಎಲ್ಲಿರಬೇಕು ಮತ್ತು ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ಅಂತಿಮವಾಗಿ ರಾಜ್ಯದ ಜನತೆಯೇ ನಿರ್ಧರಿಸುತ್ತಾರೆ ಎಂದು ಹೇಳಿದ ಎಚ್‌ಡಿಕೆ, ರಾಜ್ಯ ರಾಜಕಾರಣದಿಂದ ಶಾಶ್ವತವಾಗಿ ದೂರ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವಾಗ ರಾಜ್ಯಕ್ಕೆ ವಾಪಸ್ ಬರಬೇಕು ಎನ್ನುವುದನ್ನು ಶೀಘ್ರವೇ ತೀರ್ಮಾನಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ತಂದು ಜನರಿಗೆ ನೆಮ್ಮದಿ ಒದಗಿಸುವುದೇ ತಮ್ಮ ಗುರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಜೆಡಿಎಸ್ ಪಕ್ಷವು ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ. ವಿಲೀನದ ವದಂತಿಗಳನ್ನು ತಳ್ಳಿಹಾಕಿದ ಅವರು, ತಾವು ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಮುಂದುವರಿಯುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ರವಾನಿಸಿದ್ದಾರೆ. ಸಂಕ್ರಾಂತಿಯಂದೇ ಎಚ್‌ಡಿಕೆ ಸಿಡಿಸಿದ ಈ ರಾಜಕೀಯ ‘ಬಾಂಬ್’, ಮುಂದಿನ ಚುನಾವಣಾ ಸಮರಕ್ಕೆ ಈಗಿನಿಂದಲೇ ಕಹಳೆ ಮೊಳಗಿಸಿದಂತಿದೆ.
