ಟಿಕೆಟ್ ಹಂಚಿಕೆ ವಿಚಾರವಾಗಿ ದಿವಂಗತ ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಸಿಎಂ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಈ ಮಹತ್ವದ ಸಭೆ ನಡೆದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದವರಲ್ಲಿ ದಿ. ಹೆಚ್.ವೈ. ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ ಹಾಗೂ ಪುತ್ರಿಯರಾದ ಬಾಯಕ್ಕ ಮೇಟಿ ಮತ್ತು ಮಹಾದೇವಿ ಮೇಟಿ ಅವರು ಉಪಸ್ಥಿತರಿದ್ದರು. ಮುಂಬರುವ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಹಾಗೂ ಕ್ಷೇತ್ರದ ಹಿಡಿತದ ದೃಷ್ಟಿಯಿಂದ ಮೇಟಿ ಕುಟುಂಬದ ಸದಸ್ಯರಿಗೇ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಬಹುತೇಕ ಒಲವು ತೋರಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ವರಿಷ್ಠರು ಕುಟುಂಬದವರಲ್ಲೇ ಒಬ್ಬರಿಗೆ ಟಿಕೆಟ್ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ತಮ್ಮ ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಮತ್ತು ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭವಾಗಲಿದೆ ಎಂಬ ವಿಚಾರವಾಗಿ ಒಮ್ಮತದ ನಿರ್ಧಾರಕ್ಕೆ ಬರಲು ಮೇಟಿ ಅವರ ಮಕ್ಕಳು ಖುದ್ದಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
