ರಾಜ್ಯದಲ್ಲಿ ವಿವಿಧ ರಾಜ್ಯ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಒಟ್ಟು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 5ನೇ ಹಂತದಲ್ಲಿ 1,897 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 3,986 ಕಿ.ಮೀ. ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಲಾಗುವುದು. ಇದರ ಹೊರತಾಗಿ, ಆನೇಕಲ್–ಸರ್ಜಾಪುರ–ವರ್ತೂರು–ವಿಮಾನ ನಿಲ್ದಾಣ–ನೆಲಮಂಗಲ ರಸ್ತೆ ಕಾಮಗಾರಿಗೆ ಹೆಚ್ಚುವರಿಯಾಗಿ 1,118 ಕೋಟಿ ರೂ.ಗಳನ್ನು ಸಂಪುಟ ಮಂಜೂರು ಮಾಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿಸೆಂಬರ್ 2ರಿಂದ ಬೆಳಗಾವಿ ಅಧಿವೇಶನ, ಸ್ಥಳೀಯ ಚುನಾವಣೆಗೆ ಒಲವು
ರಾಜ್ಯ ಶಾಸಕಾಂಗದ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ. ಇದೇ ವೇಳೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿದ್ದು, ಇವಿಎಂ ಬದಲು ಹಳೆಯ ಮಾದರಿಯಂತೆ ‘ಮತಪತ್ರ’ (Ballot Paper) ಮೂಲಕವೇ ಮತದಾನ ನಡೆಸಲು ಸಹಮತ ವ್ಯಕ್ತವಾಗಿದೆ. ಆದರೆ, ಮತದಾರರ ಪಟ್ಟಿಯ (SIR ಅಥವಾ ರಾಜ್ಯ ಆಯೋಗದ ಪಟ್ಟಿ) ಬಳಕೆಯ ಬಗ್ಗೆ ಗೊಂದಲವಿರುವುದರಿಂದ ಚುನಾವಣೆ ಘೋಷಣೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.
ಆರೋಗ್ಯ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ 40 ಕೋಟಿ ರೂ. ವೆಚ್ಚದಲ್ಲಿ ರೋಬೋಟಿಕ್ ಉಪಕರಣ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC) ಮೂಲಕ 26.10 ಕೋಟಿ ರೂ. ವೆಚ್ಚದಲ್ಲಿ ನೂತನ ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನು ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು 1,008 ಚದರ ಮೀಟರ್ ವಿಸ್ತೀರ್ಣದಲ್ಲಿ ಡಿಬಿಎಫ್‌ಒಟಿ (DBFOT) ಮಾದರಿಯಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗುವುದು.
ಟರ್ಫ್ ಕ್ಲಬ್ ಗುತ್ತಿಗೆ ನವೀಕರಣ, ಸನ್ನತಿ ಪ್ರಾಧಿಕಾರ ರಚನೆ
ಐತಿಹಾಸಿಕ ಹಾಗೂ ಪುರಾತತ್ವ ಮಹತ್ವ ಹೊಂದಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪ್ರಾಚೀನ ಬೌದ್ಧ ಕೇಂದ್ರ ‘ಸನ್ನತಿ’ಯ ಅಭಿವೃದ್ಧಿಗಾಗಿ ಪ್ರತ್ಯೇಕ ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ವಿಧೇಯಕ ಅನುಮೋದಿಸಲಾಗಿದೆ. ವಿವಾದದಲ್ಲಿದ್ದ ಟರ್ಫ್ ಕ್ಲಬ್ ಗುತ್ತಿಗೆಯನ್ನು ಪರಿಷ್ಕರಿಸಲಾಗಿದ್ದು, ಮತ್ತೆ 30 ವರ್ಷಗಳ ಅವಧಿಗೆ 4 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಕ್ಲಬ್ ಸ್ಥಳಾಂತರದ ಬಗ್ಗೆ ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ. ಇದರ ಜೊತೆಗೆ ಹಿರಿಯೂರು ತಾಲೂಕಿನ ಕೆಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ.
