ಧಾರವಾಡ: ತಮ್ಮ ಖಾಸಗಿ ಶೋ ರೂಂಗಾಗಿ ಸಾರ್ವಜನಿಕ ರಸ್ತೆಯ ನಕ್ಷೆಯನ್ನೇ ಬದಲಿಸಿದ್ದಾರೆ ಎಂಬ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ (Arvind Bellad) ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?
ಧಾರವಾಡದ ರಾಯಾಪುರ ಬಡಾವಣೆಯಲ್ಲಿ ಅರವಿಂದ್ ಬೆಲ್ಲದ್ ಅವರಿಗೆ ಸೇರಿದ ಶೋ ರೂಂ ಇದೆ. ಈ ಶೋ ರೂಂಗೆ ಅನುಕೂಲವಾಗುವಂತೆ ಸಂಜೀವಿನಿ ಪಾರ್ಕ್ ಹಿಂಭಾಗದ ಮುಖ್ಯ ರಸ್ತೆಗೆ ಜೋಡಣೆಯಾಗುವ ರಸ್ತೆಯ ದಿಕ್ಕನ್ನೇ ಬದಲಿಸಲಾಗಿದೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ.
ಮೂಲ ರಸ್ತೆ ಮಾಯವಾಗಿರುವುದರಿಂದ ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ ತೆರಳಲು ದಾರಿಯಿಲ್ಲದೆ ಪರದಾಡುವಂತಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಲೋಕಾಯುಕ್ತಕ್ಕೆ ಈ ರಸ್ತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದು, ಲೋಕಾಯುಕ್ತರು ದೂರುದಾರರಿಗೆ ಪ್ರಾಧಿಕಾರ ನೀಡಿದ ಉತ್ತರದ ಪ್ರತಿಯನ್ನು ನೀಡಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ಲೋಕಾಯುಕ್ತ (Lokayukta) ಪೊಲೀಸರು ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಗೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ. ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ತಪಾಸಣೆ ಈಗಾಗಲೇ ಆರಂಭವಾಗಿದ್ದು, ಶಾಸಕ ಬೆಲ್ಲದ್ ಅವರಿಗೆ ಈ ಪ್ರಕರಣ ಕಾನೂನು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
