ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ. ಬೇಗೂರಿನಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಪಾಠ ಮಾಡಬೇಕಾದ ಗುರುವೇ ದಾರಿ ತಪ್ಪಿ ವಿದ್ಯಾರ್ಥಿನಿಗೆ ‘ಲವ್ ಯು’ ಎಂದು ಹೇಳಿದ್ದು, ಇದರಿಂದ ರೊಚ್ಚಿಗೆದ್ದ ಯುವತಿ ಕ್ಲಾಸ್‌ರೂಮ್‌ನಲ್ಲೇ ಲೆಕ್ಚರರ್‌ಗೆ ಗೂಸಾ ನೀಡಿದ್ದಾಳೆ.
ಕಾಲೇಜಿನ ಉಪನ್ಯಾಸಕ ಅಬ್ದುಲ್ ಎಂಬಾತನೇ ವಿದ್ಯಾರ್ಥಿನಿಯ ಕೈಯಿಂದ ಪೆಟ್ಟು ತಿಂದ ವ್ಯಕ್ತಿ. ಈತ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಲವ್ ಯು ಎಂದು ಹೇಳಿ ಪ್ರಪೋಸ್ ಮಾಡಿದ್ದನು. ಉಪನ್ಯಾಸಕನ ಈ ಅಸಭ್ಯ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿನಿ, ಆತನ ಪ್ರಪೋಸಲ್ ಅನ್ನು ತಿರಸ್ಕರಿಸಿದ್ದಲ್ಲದೆ, ಕ್ಲಾಸ್‌ರೂಮ್‌ನಲ್ಲಿಯೇ ಆತನಿಗೆ ಚಪ್ಪಲಿಯಿಂದ ಹೊಡೆದು, ಒದ್ದು ತಕ್ಕ ಶಾಸ್ತಿ ಮಾಡಿದ್ದಾಳೆ.
ಈ ವೇಳೆ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಕೂಡ ಯುವತಿಯ ಬೆಂಬಲಕ್ಕೆ ನಿಂತು ಉಪನ್ಯಾಸಕ ಅಬ್ದುಲ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜಿನ ತರಗತಿಯೊಳಗೇ ನಡೆದ ಈ ಹೈಡ್ರಾಮಾ ಇದೀಗ ಭಾರಿ ಸಂಚಲನ ಮೂಡಿಸಿದ್ದು, ಪವಿತ್ರವಾದ ವೃತ್ತಿಯಲ್ಲಿದ್ದುಕೊಂಡು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಲೆಕ್ಚರರ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
