ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ ದೂರಿನನ್ವಯ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರ ವಿರುದ್ಧ ದೆಹಲಿ ಪೊಲೀಸರು ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಅನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಆರೋಪದ ಮೇಲೆ ಈ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 3 ರಂದು ದಾಖಲಾಗಿ, ಭಾನುವಾರ ಬಹಿರಂಗಗೊಂಡ ಈ ಎಫ್‌ಐಆರ್‌ನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಲ್ಲದೆ, ಕಾಂಗ್ರೆಸ್ ನಾಯಕರಾದ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್ (ವೈಐ), ಡೋಟೆಕ್ಸ್ ಮರ್ಕಂಡೈಸ್ ಲಿಮಿಟೆಡ್ ಮತ್ತು ಎಜೆಎಲ್ ಸಂಸ್ಥೆಯ ಹೆಸರನ್ನು ಉಲ್ಲೇಖಿಸಲಾಗಿದೆ. ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 403 (ಆಸ್ತಿಯ ದುರುಪಯೋಗ), 406 (ನಂಬಿಕೆ ದ್ರೋಹ) ಮತ್ತು 420 (ವಂಚನೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಮಾರು 2,000 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಎಜೆಎಲ್ ಸಂಸ್ಥೆಯನ್ನು, ಯಂಗ್ ಇಂಡಿಯನ್ ಮೂಲಕ ಕೇವಲ 50 ಲಕ್ಷ ರೂ. ಪಾವತಿಸಿ ಗಾಂಧಿ ಕುಟುಂಬ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬುದು ಪ್ರಮುಖ ಆರೋಪವಾಗಿದೆ. ಈ ಹಗರಣದಲ್ಲಿ ಒಟ್ಟು 988.03 ಕೋಟಿ ರೂ. ಮೊತ್ತದ ಅಪರಾಧ ಕೃತ್ಯ ನಡೆದಿದೆ ಎಂದು ಇಡಿ ಅಂದಾಜಿಸಿದೆ. ಎಜೆಎಲ್ ಷೇರುದಾರರಿಗೆ ಮತ್ತು ಸಾರ್ವಜನಿಕ ದಾನಿಗಳಿಗೆ ವಂಚನೆ ಎಸಗಲಾಗಿದೆ ಎಂದು ಇಡಿ ಆರೋಪಿಸಿದೆ.
ಇನ್ನೊಂದೆಡೆ, ಈ ಆರೋಪಗಳನ್ನು ಕಾಂಗ್ರೆಸ್ ಪಕ್ಷವು “ಸಂಪೂರ್ಣ ನಕಲಿ” ಎಂದು ತಳ್ಳಿಹಾಕಿದೆ. “ಯಾವುದೇ ಹಣ ವರ್ಗಾವಣೆಯಾಗದ ಮತ್ತು ಸ್ಥಿರ ಆಸ್ತಿ ಹಸ್ತಾಂತರವಾಗದ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಹೆಸರಿನಲ್ಲಿ ಸುಳ್ಳು ಕೇಸ್ ದಾಖಲಿಸಲಾಗಿದೆ,” ಎಂದು ಪಕ್ಷ ಟೀಕಿಸಿದೆ. ತನಿಖೆಯ ವೇಳೆ ನಕಲಿ ಬಾಡಿಗೆ ಒಪ್ಪಂದಗಳು ಮತ್ತು ಬೋಗಸ್ ದೇಣಿಗೆಗಳ ಬಗ್ಗೆಯೂ ಇಡಿ ಮಾಹಿತಿ ನೀಡಿದ್ದು, ಕೆಲವೊಂದು ಜಾಹೀರಾತು ಹಣವು ಕಾಂಗ್ರೆಸ್ ನಾಯಕರಿಂದ ರಕ್ಷಣೆ ಪಡೆಯಲು ನೀಡಲಾದ ಲಂಚದಂತಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
