S Shorts

Nelamangala ಬಳಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್: ಕೂದಲೆಳೆ ಅಂತರದಲ್ಲಿ ಪಾರಾದ 40 ಪ್ರಯಾಣಿಕರು!

Nelamangala ಬಳಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್: ಕೂದಲೆಳೆ ಅಂತರದಲ್ಲಿ ಪಾರಾದ 40 ಪ್ರಯಾಣಿಕರು!
Author: Sagaradventure
Posted By: Sagaradventure
Updated: Feb 6, 2026 | 10:38 AM

ಬೆಂಗಳೂರು: ರಾಜ್ಯದಲ್ಲಿ ಬಸ್ ಅಗ್ನಿ ಅವಘಡಗಳ ಸರಣಿ ಮುಂದುವರಿದಂತಿದ್ದು, ಇಂದು (ಶುಕ್ರವಾರ) ಬೆಳಿಗ್ಗೆ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 40 ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ‘ಸಂಜನಾ ಟ್ರಾವೆಲ್ಸ್’ಗೆ (Sanjana Travels) ಸೇರಿದ ಸ್ಲೀಪರ್ ಬಸ್, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಹನುಮಂತಪುರ ಗೇಟ್ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರಿಂದ ಬಸ್ ನಿಧಾನಗತಿಯಲ್ಲೇ ಚಲಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲೇ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ಮತ್ತು ಸಿಬ್ಬಂದಿ ಕೂಡಲೇ ಬಸ್‌ನಿಂದ ಕೆಳಗೆ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಇಡೀ ಬಸ್‌ಗೆ ಆವರಿಸಿದ್ದು, ವಾಹನ ಸಂಪೂರ್ಣ ಕರಕಲಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದರೂ, ಬಸ್‌ನಲ್ಲಿದ್ದ ಅವರ ಲಗೇಜ್ ಮತ್ತು ಬೆಲೆಬಾಳುವ ವಸ್ತುಗಳು ಸುಟ್ಟು ಬೂದಿಯಾಗಿವೆ.

​ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.