ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಅನ್ಯೋನ್ಯವಾಗಿದ್ದ ದಂಪತಿಯ ಬಾಳಲ್ಲಿ ವಿಧಿ ಕ್ರೂರವಾಗಿ ಆಟವಾಡಿದೆ. ಸ್ನಾನಕ್ಕೆ ಹೋದ ಪತಿ ಗ್ಯಾಸ್ ಗೀಸರ್ ಲೀಕ್ ಆಗಿ ಪ್ರಾಣ ಕಳೆದುಕೊಂಡರೆ, ಈ ಸುದ್ದಿ ಕೇಳಿದ ಆಘಾತದಲ್ಲಿ ಪತ್ನಿ ಕೂಡ ಆತ್ಮಹ*ತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃ*ತರನ್ನು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಗಳಾದ ರಾಜು (48) ಮತ್ತು ಅವರ ಪತ್ನಿ ಮೀನಾ (42) ಎಂದು ಗುರುತಿಸಲಾಗಿದೆ.
ಕೆಲಸದ ನಿಮಿತ್ತ ನೆಲಮಂಗಲ ನಗರದಲ್ಲಿ ಮಗನೊಂದಿಗೆ ವಾಸವಾಗಿದ್ದ ಈ ದಂಪತಿಯ ಬದುಕು ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿಯಾಗಿದೆ. ರಾಜು ಅವರು ಸ್ನಾನ ಮಾಡಲು ಬಾತ್‌ರೂಂಗೆ ಹೋಗಿದ್ದಾಗ, ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿದೆ. ಇದರಿಂದ ಉಸಿರಾಡಲು ಸಾಧ್ಯವಾಗದೆ ಅವರು ಬಾತ್‌ರೂಂನಲ್ಲೇ ಒದ್ದಾಡಿ ಪ್ರಾ*ಣಬಿಟ್ಟಿದ್ದಾರೆ.
ಪತಿಯ ಮುಖವನ್ನೂ ನೋಡದೆ ಕಠಿಣ ನಿರ್ಧಾರ
ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಮೀನಾ ಅವರಿಗೆ ಪತಿಯ ಸಾ*ವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾದ ಅವರು, ಮೃ*ತ ಪತಿಯ ಮುಖವನ್ನೂ ನೋಡುವ ಧೈರ್ಯ ಮಾಡಿಲ್ಲ. ಬದಲಾಗಿ ನೆಲಮಂಗಲದ ಜಕ್ಕಸಂದ್ರದಲ್ಲಿ ತಾವು ನಿರ್ಮಾಣ ಮಾಡುತ್ತಿದ್ದ ಮನೆಯ ಬಳಿಗೆ ತೆರಳಿ, ಅಲ್ಲಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾ*ಣ ಕಳೆದುಕೊಂಡಿದ್ದಾರೆ.
ಕಣ್ಣೀರು ತರಿಸುವ ಡೆತ್‌ನೋಟ್
ಆತ್ಮಹ*ತ್ಯೆಗೂ ಮುನ್ನ ಮೀನಾ ಅವರು ಬರೆದಿಟ್ಟಿರುವ ಡೆತ್‌ನೋಟ್ ಎಲ್ಲರ ಕರುಳು ಹಿಂಡುವಂತಿದೆ. “ಗಂಡನನ್ನು ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ. ನನ್ನನ್ನು ಕ್ಷಮಿಸಿಬಿಡಿ,” ಎಂದು ಬರೆದಿದ್ದಾರೆ. ಅಲ್ಲದೆ, ಕುಟುಂಬದವರಿಗೆ ಯಾರ್ಯಾರಿಗೆ ಏನೇನು ಹಣಕಾಸು ನೀಡಬೇಕು ಎಂಬುದರ ಬಗ್ಗೆಯೂ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ಹೋಗಿದ್ದಾರೆ.
ಈ ಜೋಡಿ ಸಾ*ವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃ*ತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
