ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವಿಚಾರಗಳು ಹೊರಬರುತ್ತಿದ್ದು, ಆರೋಪಿ ಸಿಯಾ ಗೋಯಲ್ ಪೋಷಕರು ಈ ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹೇಯ ಕೃತ್ಯದಲ್ಲಿ ಯಾರೇ ದೋಷಿಯಾಗಿದ್ದರೂ, ಸಂತ್ರಸ್ತನನ್ನು ಯಾವ ಸ್ಥಳದಿಂದ ತಳ್ಳಲಾಗಿದೆಯೋ ಅದೇ ಪ್ರಪಾತದಿಂದ ಅಪರಾಧಿಯನ್ನೂ ಸಹ ಕೆಳಗೆ ತಳ್ಳಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ಜೂನ್ 23 ರಂದು ಲೋಹಗಡ ಕೋಟೆಯ ಪ್ರಪಾತದಿಂದ ತಳ್ಳಿ ಕೇತನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಉದ್ಯಮಿಯ ಹತ್ಯೆಯನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಸಂಚು ರೂಪಿಸಿ ಮಾಡಿದ್ದರು ಎಂಬ ಸ್ಫೋಟಕ ವಿಚಾರ ತನಿಖೆಯ ವೇಳೆ ಬಯಲಾಗಿತ್ತು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಯಾಳ ಕುಟುಂಬಸ್ಥರು, ಪ್ರಕರಣದ ಪ್ರಮುಖ ಆರೋಪಿ ಚೇತನ್ ಕುರಿತು ತಮಗೆ ಯಾವುದೇ ಮಾಹಿತಿಯಿರಲಿಲ್ಲ ಹಾಗೂ ಆತನ ಮುಖವನ್ನು ಸಹ ತಾವು ನೋಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ತಾಯಿ ಪೂಜಾ ಗೋಯಲ್ ಮಾತನಾಡಿ, ನಿಶ್ಚಿತಾರ್ಥದ ನಂತರ ತಮ್ಮ ಮಗಳು ಕೇವಲ ಕೇತನ್ ಜೊತೆ ಮಾತ್ರ ಮಾತನಾಡುತ್ತಿದ್ದಳು. ಈ ವಿವಾಹದ ಮೇಲೆ ನಮ್ಮ ಕುಟುಂಬವು ಬಹಳಷ್ಟು ಭರವಸೆ ಇಟ್ಟುಕೊಂಡಿತ್ತು. ಚೇತನ್ ಬಗ್ಗೆ ನಮಗೆ ಯಾವುದೇ ವಿಚಾರ ತಿಳಿದಿರಲಿಲ್ಲ. ಆಕೆ ಇಂತಹ ಭೀಕರ ಅಪರಾಧ ಮಾಡಲು ಒಪ್ಪಿದ್ದಾಳೆ ಎಂಬುದನ್ನು ನಾನು ಕಿಂಚಿತ್ತೂ ನಂಬುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮದುವೆಯ ಬಗ್ಗೆ ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಒಂದು ವೇಳೆ ಆಕೆಗೆ ಕೇತನ್ ಜೊತೆ ಮಾತನಾಡಲು ಏನಾದರೂ ಸಮಸ್ಯೆಯಿದ್ದರೆ ಆಕೆ ಅದನ್ನು ನಮ್ಮೊಂದಿಗೆ ಚರ್ಚಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.
ತಮ್ಮ ಸ್ವಂತ ಮಗಳೇ ಅಪರಾಧಿಯಾಗಿದ್ದರೂ ಸಹ ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿಯಾ ಪೋಷಕರು ಒತ್ತಾಯಿಸಿದ್ದಾರೆ. ನಮ್ಮ ಅಳಿಯ ಕೇತನ್ ಯಾವ ಕೋಟೆಯಿಂದ ಬಿದ್ದನೋ, ಅದೇ ಕೋಟೆಯಿಂದ ದೋಷಿಯನ್ನು ಕೆಳಗೆ ತಳ್ಳಬೇಕು, ಅದು ನನ್ನ ಸ್ವಂತ ಮಗಳೇ ಆಗಿದ್ದರೂ ಸರಿ ಎಂದು ಸಿಯಾ ತಂದೆ ಪ್ರವೀಣ್ ಕಣ್ಣೀರು ಹಾಕಿದ್ದಾರೆ. ನಾವು ನಮ್ಮ ಮಗನನ್ನು ಹಾಗೂ ಒಂದು ಅದ್ಭುತ ಸಂಬಂಧವನ್ನು ಕಳೆದುಕೊಂಡಿದ್ದೇವೆ. ಸದ್ಯ ತನಿಖೆ ನಡೆಯುತ್ತಿದ್ದು, ತನಿಖೆಯಿಂದ ಏನೇ ಫಲಿತಾಂಶ ಬಂದರೂ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ಮಾತನಾಡಿದ್ದ ಕೇತನ್ ತಾಯಿ, ಸಿಯಾಳಿಂದ ನಮಗೆ ಭಾರಿ ಮೋಸವಾಗಿದೆ. ಆಕೆಯ ನಡವಳಿಕೆಯ ಬಗ್ಗೆ ನಮಗೆ ಒಂದೇ ಒಂದು ಅನುಮಾನವೂ ಬಂದಿರಲಿಲ್ಲ ಎಂದು ಕಣ್ಣೀರು ಹಾಕಿದ್ದರು. ಈ ನಡುವೆ ಸಂತ್ರಸ್ತನ ತಂದೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ವಿಧಾನಸಭೆಯ ಅಧ್ಯಕ್ಷರು ಈ ಪ್ರಕರಣದ ಮುಂದಿನ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
