S Shorts

4,500 ಕೋಟಿ ರೂ. ಮಹಾವಂಚನೆ: ಆರೋಪಿ ಶಿವಾನಂದನ 15 ಬ್ಯಾಂಕ್ ಖಾತೆಗಳು ಫ್ರೀಜ್, ಬ್ಯಾಂಕ್‌ಗಳಿಗೆ CID ಬಿಸಿ!

4,500 ಕೋಟಿ ರೂ. ಮಹಾವಂಚನೆ: ಆರೋಪಿ ಶಿವಾನಂದನ 15 ಬ್ಯಾಂಕ್ ಖಾತೆಗಳು ಫ್ರೀಜ್, ಬ್ಯಾಂಕ್‌ಗಳಿಗೆ CID ಬಿಸಿ!
Author: Sagaradventure
Posted By: Sagaradventure
Updated: May 19, 2026 | 11:34 AM

ಬೆಳಗಾವಿ: ​ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಬರೋಬ್ಬರಿ 4,500 ಕೋಟಿ ರೂಪಾಯಿಗಳ ಬೃಹತ್ ವಂಚನೆ ಪ್ರಕರಣದ ಬೆನ್ನತ್ತಿರುವ ಸಿಐಡಿ (CID) ಅಧಿಕಾರಿಗಳು ಇದೀಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಹಾಗೂ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ಗೆ ಸೇರಿದ 15 ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿರುವ ತನಿಖಾಧಿಕಾರಿಗಳು, ತಕ್ಷಣವೇ ಆ ಎಲ್ಲಾ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ.

​ಈ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ ಸಿಐಡಿ ಅಧಿಕಾರಿಗಳೇ ದಂಗಾಗುವಂತಹ ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ. ಜಪ್ತಿಯಾಗಿರುವ ಪ್ರತಿಯೊಂದು ಖಾತೆಯಲ್ಲೂ ಬರೋಬ್ಬರಿ 100 ಕೋಟಿ, 80 ಕೋಟಿ, 50 ಕೋಟಿ ಹಾಗೂ 20 ಕೋಟಿ ರೂ. ವರೆಗಿನ ಭಾರಿ ಮೊತ್ತದ ಹಣ ಪತ್ತೆಯಾಗಿದೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ, ಅಂದರೆ ಸಾವಿರಾರು ಕೋಟಿ ರೂಪಾಯಿಗಳ ಹಣ ನಿರಂತರವಾಗಿ ವರ್ಗಾವಣೆಯಾಗುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ಮಾತ್ರ ಆದಾಯ ತೆರಿಗೆ ಇಲಾಖೆ (IT) ಅಥವಾ ಜಾರಿ ನಿರ್ದೇಶನಾಲಯದ (ED) ಗಮನಕ್ಕೆ ತಾರದೆ ಮುಚ್ಚಿಟ್ಟಿರುವುದು ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ಯಾರಿಗೂ ಸುಳಿವು ಸಿಗದಂತೆ ಕೋಟ್ಯಂತರ ರೂಪಾಯಿಗಳ ಈ ಅಕ್ರಮ ವಹಿವಾಟಿಗೆ ಬ್ಯಾಂಕ್ ಅಧಿಕಾರಿಗಳೇ ಸಾಥ್ ನೀಡಿದರಾ ಎಂಬ ಶಂಕೆಯ ಮೇರೆಗೆ ಸಿಐಡಿ ಅಧಿಕಾರಿಗಳು ತನಿಖೆಯ ದಿಕ್ಕನ್ನು ವಿಸ್ತರಿಸಿದ್ದಾರೆ. ಈ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಸಿಐಡಿ, ನಿಯಮ ಉಲ್ಲಂಘಿಸಿದ 5 ಪ್ರಮುಖ ಬ್ಯಾಂಕುಗಳಿಗೆ ನೋಟಿಸ್ ಜಾರಿ ಮಾಡಲು ಸಕಲ ಸಿದ್ಧತೆ ನಡೆಸಿದೆ.