S Shorts

ತುಮಕೂರಿನಲ್ಲಿ ತಪ್ಪಿದ ಮತ್ತೊಂದು ಮಹಾ ದುರಂತ: Sigandoor ದೇವಿ ದರ್ಶನ ಮುಗಿಸಿ ಬರ್ತಿದ್ದ ಭಕ್ತರ ಬಸ್​ಗೆ ಅಪಘಾತ!

ತುಮಕೂರಿನಲ್ಲಿ ತಪ್ಪಿದ ಮತ್ತೊಂದು ಮಹಾ ದುರಂತ: Sigandoor ದೇವಿ ದರ್ಶನ ಮುಗಿಸಿ ಬರ್ತಿದ್ದ ಭಕ್ತರ ಬಸ್​ಗೆ ಅಪಘಾತ!
Author: Sagaradventure
Posted By: Sagaradventure
Updated: Feb 2, 2026 | 11:32 AM

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೆಟ್ಟು ನಿಂತಿದ್ದ ಲಾರಿಗೆ ವೇಗವಾಗಿ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಬಸ್‌ ಚಾಲಕ ಸೇರಿದಂತೆ ಒಟ್ಟು 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆ ಬಳಿ ನಡೆದಿದೆ.

ಬೆಂಗಳೂರು ಮೂಲದ ಭಕ್ತರು ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್‌ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನೆನ್ನೆ (ಭಾನುವಾರ) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಗಮನಿಸದ ಬಸ್‌ ಚಾಲಕ, ನೇರವಾಗಿ ಹೋಗಿ ಲಾರಿಯ ಹಿಂಭಾಗಕ್ಕೆ ಗುದ್ದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಘಟನೆಯಲ್ಲಿ ಬಸ್‌ ಚಾಲಕ ಮಾರುತಿ, ಪ್ರಯಾಣಿಕರಾದ ಶೀತಲ್, ಜಗದಂಬ ಮತ್ತು ರತ್ನ ಸೇರಿದಂತೆ ಒಟ್ಟು 15 ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತಾವರೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.