ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭಾರಿ ಗುಡುಗು-ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆಗೆ ಸಿಲಿಕಾನ್ ಸಿಟಿ ಅಕ್ಷರಶಃ ತತ್ತರಿಸಿದೆ. ಮಳೆಯ ಅಬ್ಬರ ಹಾಗೂ ಬಿರುಗಾಳಿಗೆ ಬೌರಿಂಗ್ ಆಸ್ಪತ್ರೆಯ (Bowring Hospital) ಕಾಂಪೌಂಡ್ ಗೋಡೆ ಕುಸಿದು ಬಿದ್ದು, 6 ವರ್ಷದ ಬಾಲಕಿ ಸೇರಿ 7 ಮಂದಿ ದಾರುಣವಾಗಿ ಸಾ*ವನ್ನಪ್ಪಿದ್ದಾರೆ ಹಾಗೂ 9 ಜನರಿಗೆ ಗಾಯಗಳಾಗಿವೆ. ಮಳೆಯಿಂದ ರಕ್ಷಣೆ ಪಡೆಯಲು 8 ಅಡಿ ಎತ್ತರದ ಗೋಡೆಯ ಬಳಿ ಆಶ್ರಯ ಪಡೆದಿದ್ದವರ ಮೇಲೆಯೇ ಈ ದುರಂತ ಸಂಭವಿಸಿದ್ದು, ಮೃ*ತರ ಪೈಕಿ ಹಲವರು ಆಸ್ಪತ್ರೆ ಆವರಣದ ಬಳಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳಾಗಿದ್ದಾರೆ.
ಮೃ*ತರ ವಿವರ: ಮೃ*ತರನ್ನು ಫಯಾಜ್ ಅಹ್ಮದ್ (39), ಮೊಹಮ್ಮದ್ ಅಬ್ದುಲ್ ಹಕ್ (52), ಮುಸ್ಫಿರಾ (6), ಕೆ.ಕೆ. ಲತಾ (57), ಸ್ಮಿತಾ (47), ಮೊಹಮ್ಮದ್ ಸಲಾವುದ್ದೀನ್ (36) ಹಾಗೂ ನಸೀಮುಲ್ಲಾ (19) ಎಂದು ಗುರುತಿಸಲಾಗಿದೆ. ಮೃ*ತಪಟ್ಟ 6 ವರ್ಷದ ಬಾಲಕಿ ಮುಸ್ಫಿರಾ ತನ್ನ ಮುಂಬರುವ 7ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಾಪಿಂಗ್ ಮಾಡಲು ಬಂದಿದ್ದಳು ಎನ್ನಲಾಗಿದೆ. ದುರಂತದಲ್ಲಿ ಮೃ*ತಪಟ್ಟ ಇಬ್ಬರು ಮಹಿಳೆಯರು ಕೇರಳ ಮೂಲದವರಾಗಿದ್ದು, ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಪರಿಹಾರ ಘೋಷಣೆ ಹಾಗೂ ತನಿಖೆಗೆ ಸಿಎಂ ಸೂಚನೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃ*ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. “ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ” ಎಂದು ತಿಳಿಸಿದರು. ಇದೇ ವೇಳೆ ಬಿಬಿಎಂಪಿ ಎಂಜಿನಿಯರ್‌ಗಳ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಿದ ಅವರು, “ಗೋಡೆ ಶಿಥಿಲಾವಸ್ಥೆಯಲ್ಲಿದ್ದರೆ ಎಂಜಿನಿಯರ್‌ಗಳು ಏಕೆ ನಿರ್ಲಕ್ಷ್ಯ ವಹಿಸಿದರು? ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಾಗಿ ಗೋಡೆ ಬಳಿ ಮರಳು ಸುರಿಯಲಾಗಿತ್ತು, ಇದರ ಒತ್ತಡದಿಂದಲೇ ಗೋಡೆ ಕುಸಿದಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ವಿಪರೀತ ಹವಾಮಾನದಿಂದಾದ ದುರಂತ ಎಂದು ಹೇಳಿದ್ದು, ನಾಗರಿಕ ಅಧಿಕಾರಿಗಳ ಲೋಪವನ್ನು ತಳ್ಳಿಹಾಕಿದ್ದಾರೆ.
ಪ್ರತ್ಯೇಕ ಘಟನೆಗಳಲ್ಲಿ ಮೂವರು ಬ*ಲಿ:
ಮಳೆ-ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ನಗರದಲ್ಲಿ ಇನ್ನೂ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
* ಶಿವಾಜಿನಗರದಲ್ಲಿ ನಿಲ್ಲಿಸಿದ್ದ ಬೈಕ್ ತರಲು ಹೋದ 17 ವರ್ಷದ ಸೈಯದ್ ಸುಫಿಯಾನ್, ಮಳೆ ನೀರಿನಲ್ಲಿದ್ದ ಲೈವ್ ವಿದ್ಯುತ್ ತಂತಿ ತುಳಿದು ಮೃ*ತಪಟ್ಟಿದ್ದಾನೆ.
* ಬನ್ನೇರುಘಟ್ಟ ರಸ್ತೆಯ ಜೇಡಿಮರ ಜಂಕ್ಷನ್ ಬಳಿ 30 ವರ್ಷದ ಚಮ್ಮಾರ ರಘು ಎಂಬುವರು ವಿದ್ಯುತ್ ಸ್ಪರ್ಶದಿಂದ ಸಾ*ವನ್ನಪ್ಪಿದ್ದಾರೆ.
* ತಡರಾತ್ರಿ ಚಾಮರಾಜಪೇಟೆಯಲ್ಲಿ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು 35 ವರ್ಷದ ಮಂಜುನಾಥ್ ಎಂಬುವರು ಮೃ*ತಪಟ್ಟಿದ್ದಾರೆ.
ಜಲಾವೃತಗೊಂಡ ರಸ್ತೆಗಳು, ಬುಕ್‌ವರ್ಮ್ ಮಳಿಗೆಗೆ ನೀರು:
ಭಾರಿ ಮಳೆ ಹಾಗೂ ಗಂಟೆಗೆ 50 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿಗೆ ನಗರದಲ್ಲಿ 170ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ, 400ಕ್ಕೂ ಹೆಚ್ಚು ಮರದ ರೆಂಬೆಗಳು ಮುರಿದುಬಿದ್ದಿವೆ. ಎಂ.ಜಿ. ರಸ್ತೆ, ಇಂದಿರಾನಗರ, ಕೋರಮಂಗಲ, ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದು, 2 ರಿಂದ 3 ಅಡಿಯಷ್ಟು ನೀರು ನಿಂತಿತ್ತು. ವಿಧಾನಸೌಧದ 2 ಮತ್ತು 3ನೇ ಮಹಡಿಯಲ್ಲಿರುವ ಸಚಿವರ ಕೊಠಡಿಗಳಿಗೂ ಮಳೆನೀರು ನುಗ್ಗಿದೆ. ಚರ್ಚ್‌ಸ್ಟ್ರೀಟ್‌ನ ಪ್ರಸಿದ್ಧ ‘ಬುಕ್‌ವರ್ಮ್’ (Bookworm) ಪುಸ್ತಕ ಮಳಿಗೆಗೆ ಆಲಿಕಲ್ಲು ಹಾಗೂ ಮಳೆನೀರು ನುಗ್ಗಿ ಸುಮಾರು 5,000ಕ್ಕೂ ಹೆಚ್ಚು ಪುಸ್ತಕಗಳು ನಾಶವಾಗಿವೆ.
ಜಯದೇವ, ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಬಳಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
