ಹೈದರಾಬಾದ್‌ನ ಮಿಯಾಪುರದಲ್ಲಿ 19 ವರ್ಷದ ನೀಟ್ ಆಕಾಂಕ್ಷಿ ಶೇಖ್ ಸನಾ ಎಂಬ ಯುವತಿ ಭಾನುವಾರ ನಿಗದಿಯಾಗಿದ್ದ ನೀಟ್ ಮರುಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಶನಿವಾರ ಆ*ತ್ಮಹ*ತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಗಾಗಿ ತೀವ್ರ ಸಿದ್ಧತೆ ನಡೆಸುತ್ತಿದ್ದ ಈ ಯುವತಿ, ತನ್ನ ಸಹೋದರಿಯರೊಂದಿಗೆ ವಾಸವಿದ್ದಳು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಮೃ*ತಳ ತಂದೆ ಶೇಖ್ ಜಾಫರ್ ಹುಸೇನ್ ಅವರು ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ತಾಯಿ ಸುಮಾರು 10 ದಿನಗಳ ಹಿಂದಷ್ಟೇ ಪ್ರೊದ್ದಟೂರಿಗೆ ತೆರಳಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇಂಗ್ಲಿಷ್‌ನಲ್ಲಿ ಬರೆದಿದ್ದ ಡೆತ್‌ನೋಟ್ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾ*ವಿಗೆ ಯಾರೂ ಕಾರಣರಲ್ಲ ಎಂದು ಯುವತಿ ಉಲ್ಲೇಖಿಸಿದ್ದಾಳೆ. ಶೈಕ್ಷಣಿಕ ಒತ್ತಡ, ಕುಟುಂಬದವರ ನಿರೀಕ್ಷೆಗಳು ಹಾಗೂ ಹಿಂದಿನ ವೈಫಲ್ಯಗಳ ಆತಂಕವೇ ಈಕೆಯ ಈ ದುಡುಕಿನ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃ*ತದೇಹವನ್ನು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧೆಡೆ ನೀಟ್ ಪರೀಕ್ಷೆಗೆ ಸಂಬಂಧಿಸಿದ ಗೊಂದಲ ಹಾಗೂ ವಿಪರೀತ ಒತ್ತಡಗಳಿಗೆ ಸಿಲುಕಿ ಹಲವು ವಿದ್ಯಾರ್ಥಿಗಳು ಆ*ತ್ಮಹ*ತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಕೇಂದ್ರ ಸರ್ಕಾರದ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
