S Shorts

ಏಕಕಾಲಕ್ಕೆ 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್

ಏಕಕಾಲಕ್ಕೆ 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್
Author: Savina Naik
Posted By: Savina Naik
Updated: Apr 16, 2026 | 5:47 PM

ಬೆಂಗಳೂರು:   ರಾಜ್ಯದಾದ್ಯಂತ ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ಏಕಕಾಲಕ್ಕೆ ವರ್ಗಾವಣೆಗೊಳಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಪ್ರತಿವರ್ಷದಂತೆ ನಡೆಯುವ ಸಾಮಾನ್ಯ ವಾರ್ಷಿಕ ವರ್ಗಾರಣೆ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ.

ಸಂತೋಷ್ ಗಜಾನನ ಭಟ್ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ (Bangalore Mediation Centre) ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇವರು ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿದ್ದ ಕೆ.ಎಸ್. ಭರತ್ ಕುಮಾರ್ ಅವರನ್ನು ಬೆಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ತೆರವಾದ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಎಂಬ ಪ್ರಮುಖ ಹುದ್ದೆಗೆ ಎಂ. ಚಂದ್ರಶೇಖರ ರೆಡ್ಡಿ ಅವರನ್ನು ನೇಮಿಸಿ ಹೈಕೋರ್ಟ್‌ ಆದೇಶಿಸಿದೆ. ಈ ಇಬ್ಬರೂ ಹಿರಿಯ ಅಧಿಕಾರಿಗಳು ನ್ಯಾಯಾಂಗದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಂತೋಷ್ ಗಜಾನನ ಭಟ್ ಅವರ ವರ್ಗಾವಣೆಯಿಂದ ತೆರವಾದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಕೆ.ಬಿ. ಶಿವಪ್ರಸಾದ್‌ ಅವರನ್ನು ನೇಮಿಸಲಾಗಿದೆ.

114 ಜಿಲ್ಲಾ ನ್ಯಾಯಾಧೀಶರ ಈ ವರ್ಗಾವಣೆಯು ನ್ಯಾಯಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮವಾಗಿದೆ.   ಇದು ಕೇವಲ ಬೆಂಗಳೂರಿಗೆ ಸೀಮಿತವಾಗದೆ ಇಡೀ ರಾಜ್ಯದ ನ್ಯಾಯಾಂಗ ಘಟಕಗಳಲ್ಲಿ ಹೊಸ ಸಂಚಲನ ಮೂಡಿಸಿದೆ.