S Shorts

BRIMS ಆಸ್ಪತ್ರೆಗೆ ಉಪ ಲೋಕಾಯುಕ್ತರ ದಿಢೀರ್ ದಾಳಿ: ಲ್ಯಾಬ್ ಟೆಕ್ನಿಷಿಯನ್ ಬಳಿ ಲಕ್ಷಾಂತರ ನಗದು ಪತ್ತೆ, ಅಧಿಕಾರಿಗಳಿಗೆ ತರಾಟೆ!

BRIMS ಆಸ್ಪತ್ರೆಗೆ ಉಪ ಲೋಕಾಯುಕ್ತರ ದಿಢೀರ್ ದಾಳಿ: ಲ್ಯಾಬ್ ಟೆಕ್ನಿಷಿಯನ್ ಬಳಿ ಲಕ್ಷಾಂತರ ನಗದು ಪತ್ತೆ, ಅಧಿಕಾರಿಗಳಿಗೆ ತರಾಟೆ!
Author: Sagaradventure
Posted By: Sagaradventure
Updated: Jun 20, 2026 | 5:38 PM

ಬೀದರ್ ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಲೋಕಾಯುಕ್ತ ತಂಡವು ವಿವಿಧ ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ದಿಢೀರ್ ಪರಿಶೀಲನೆ ನಡೆಸಿದೆ. ನಗರದ ಪ್ರಮುಖ ಸರ್ಕಾರಿ ಜಿಲ್ಲಾ ಆಸ್ಪತ್ರೆಯಾದ ಬ್ರಿಮ್ಸ್ (BRIMS) ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ದಿಂಬು, ಹಾಸಿಗೆ ಹಾಗೂ ಶೌಚಾಲಯಗಳ ತೀವ್ರ ಅವ್ಯವಸ್ಥೆಯನ್ನು ಕಂಡು ನ್ಯಾಯಮೂರ್ತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಆಸ್ಪತ್ರೆಯ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದಾಗ ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ನಗದು ಹಾಗೂ ಚೆಕ್ ಪತ್ತೆಯಾಗಿರುವುದು ದೊಡ್ಡ ಸಂಚಲನ ಮೂಡಿಸಿದೆ.

ಬ್ರಿಮ್ಸ್ ಆಸ್ಪತ್ರೆಯ ದುಸ್ಥಿತಿಯನ್ನು ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ಸರ್ಕಾರ ನೀಡುತ್ತಿರುವ ಕೋಟಿ ಕೋಟಿ ರೂಪಾಯಿ ಹಣವನ್ನು ಏನು ಮಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಇಲ್ಲಿನ ದಿಂಬು ಮತ್ತು ಬೆಡ್‌ಗಳನ್ನು ನೋಡಿದರೆ ಜೈಲಿನ ವ್ಯವಸ್ಥೆಯೂ ಇದಕ್ಕಿಂತ ಉತ್ತಮವಾಗಿರುತ್ತದೆ ಎನಿಸುತ್ತದೆ. ಇಂತಹ ಗಲೀಜು ಬೆಡ್‌ಗಳ ಮೇಲೆ ವೈದ್ಯರಾದ ನೀವು ಮಲಗುತ್ತೀರಾ ಎಂದು ಪ್ರಶ್ನಿಸಿದ ಅವರು, 6 ಅಂತಸ್ತಿನ ಸುಸಜ್ಜಿತ ಕಟ್ಟಡವಿದ್ದರೂ ರೋಗಿಗಳಿಗೆ ಸರಿಯಾದ ಹಾಸಿಗೆಯಿಲ್ಲ, ಕುಡಿಯಲು ನೀರಿಲ್ಲ ಮತ್ತು ರೋಗಿಗಳ ಸಂಬಂಧಿಕರಿಗೆ ಕೂರಲು ಆಸನದ ವ್ಯವಸ್ಥೆಯೂ ಇಲ್ಲದಿರುವುದು ಅತ್ಯಂತ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು. 

ಈ ಕುರಿತು ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ ಹಾಗೂ ಡಿಸ್ಟ್ರಿಕ್ ಸರ್ಜನ್ ಎಮ್.ಎಸ್. ಬಾಳಿ ಅವರಿಗೆ ತೀವ್ರ ತರಾಟೆ ತೆಗೆದುಕೊಂಡ ಉಪ ಲೋಕಾಯುಕ್ತರು, ವಾರಕ್ಕೊಮ್ಮೆ ಇಲ್ಲಿಗೆ ಬಂದು ತಾವೇ ಖುದ್ದಾಗಿ ವಿಸಿಟ್ ಮಾಡಿದರೆ ಮಾತ್ರ ಈ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಎಚ್ಚರಿಕೆ ನೀಡಿದರು.

ಇದೇ ಭೇಟಿಯ ವೇಳೆ ಬೀದರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಸಂಜುಕುಮಾರ್ ಎಂಬಾತನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಯ ಲ್ಯಾಬ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬಳಿ 1 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮುಖಬೆಲೆಯ ಬ್ಯಾಂಕ್ ಚೆಕ್ ಪತ್ತೆಯಾಗಿದ್ದಕ್ಕೆ ಅಧಿಕಾರಿಗಳನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಇಷ್ಟೊಂದು ದೊಡ್ಡ ಮೊತ್ತದ ಹಣದ ಮೂಲದ ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಲಾಗದೆ ಲ್ಯಾಬ್ ಟೆಕ್ನಿಷಿಯನ್ ತಡಬಡಾಯಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ನ್ಯಾಯಮೂರ್ತಿಗಳು ಸದ್ಯ ಪತ್ತೆಯಾಗಿರುವ ಸಂಪೂರ್ಣ ಹಣ ಹಾಗೂ ಚೆಕ್ ಅನ್ನು ಜಪ್ತಿ ಮಾಡಿ, ಆರೋಪಿ ಸಿಬ್ಬಂದಿ ವಿರುದ್ಧ ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬ್ರಿಮ್ಸ್ ಆಸ್ಪತ್ರೆಯ ಪರಿಶೀಲನೆ ಮುಗಿಸಿದ ಉಪ ಲೋಕಾಯುಕ್ತರ ತಂಡವು ತದನಂತರ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ಕಲ್ಪಿಸಲಾಗಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿತು. ಬಸ್ ನಿಲ್ದಾಣದ ಆವರಣದಾದ್ಯಂತ ತೀವ್ರ ಅಸ್ವಚ್ಛತೆ ಹಾಗೂ ಕಸದ ರಾಶಿ ಕಂಡುಬಂದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಡಿಪೋ ವ್ಯವಸ್ಥಾಪಕರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. 

ಬಳಿಕ ಬಸ್ ನಿಲ್ದಾಣದಲ್ಲಿ ಕಾರ್ಯಾಚರಿಸುತ್ತಿರುವ ಹೋಟೆಲ್‌ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಕಿಚನ್ ಸ್ವಚ್ಛತೆಯನ್ನು ಪರಿಶೀಲಿಸಿದ ತಂಡ, ಹೋಟೆಲ್‌ಗಳಲ್ಲಿ ಕನಿಷ್ಠ ಮಟ್ಟದ ಸ್ವಚ್ಛತೆಯೂ ಇಲ್ಲದಿರುವುದನ್ನು ಕಂಡು ಗರಂ ಆಯಿತು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳುವಂತೆ ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.