ಉತ್ತರ ಕನ್ನಡ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಸರ್ಕಾರದ ಯೋಜನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಬಾರದೆಂದು ಉತ್ತರಕನ್ನಡದಿಂದ ತೆರಳಿದ್ದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ಟಿ.ನಾಯ್ಕ, ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಎಂಎಲ್‌ಸಿ ಶಾಂತಾರಾಮ ಸಿದ್ದಿ ನೇತೃತ್ವದ ನಿಯೋಗ ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ನದಿ ಸಂಬಂಧಿತ ಯೋಜನೆಗಳ ಕುರಿತು ಚರ್ಚೆ ನಡೆಸಿದೆ.
ರಾಜ್ಯ ಜಲಸಂಪನ್ಮೂಲ ಇಲಾಖೆ ಈಗಾಗಲೇ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳ ಸಾಧ್ಯತಾ ವರದಿ ಸಿದ್ಧಪಡಿಸಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಮಲೆನಾಡಿನ ಜನತೆ, ವಿಶೇಷವಾಗಿ ಬೇಡ್ತಿ ಹಾಗೂ ಅಘನಾಶಿನಿ ನದಿ ಕಣಿವೆ ಪ್ರದೇಶದ ನಿವಾಸಿಗಳು, ಈ ಯೋಜನೆಗಳಿಂದ ಪರಿಸರ ಹಾನಿ ಸಂಭವಿಸುವ ಆತಂಕ ವ್ಯಕ್ತಪಡಿಸಿದ್ದಾರೆ. ಈ ನದಿ ಕಣಿವೆಗಳಲ್ಲಿ ಅಣೆಕಟ್ಟು, ಕಾಲುವೆ, ರಸ್ತೆ, ವಿದ್ಯುತ್ ಮಾರ್ಗ ನಿರ್ಮಾಣದಿಂದ ಭೂ ಕುಸಿತ, ನೀರಿನ ಕೊರತೆ ಮತ್ತು ಅರಣ್ಯ-ವನ್ಯಜೀವಿ ನಾಶ ಉಂಟಾಗಲಿದೆ. ಸುಮಾರು ಎರಡು ಲಕ್ಷ ಮಲೆನಾಡಿನ ಕುಟುಂಬಗಳು ಈ ನದಿಗಳ ಮೇಲೆ ಅವಲಂಬಿತವಾಗಿವೆ.
ಕರಾವಳಿ ಭಾಗದ ಮೀನುಗಾರರು ಸಹ ಈ ಯೋಜನೆಯ ಪರಿಣಾಮವಾಗಿ ನದಿಗೆ ಸಿಹಿನೀರು ಬರದೇ ಉಪ್ಪುನೀರು ತುಂಬುವ ಆತಂಕದಲ್ಲಿದ್ದಾರೆ. ಪರಿಣಾಮ ಮತ್ಸ್ಯಕ್ಷಾಮ ಎದುರಾಗಿ ಜೀವನೋಪಾಯ ಕಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೇಡಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ರಚನೆಗೊಂಡು ಜನರು ಪಾದಯಾತ್ರೆ, ಸಭೆ, ನಿರ್ಣಯಗಳ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಬೇಡ್ತಿ-ವರದಾ ಜೋಡಣೆ ಮತ್ತು ಅಘನಾಶಿನಿ-ವೇದಾವತಿ ಯೋಜನೆಗಳ ಡಿ.ಪಿ.ಆರ್ ತಯಾರಿಕೆಗೆ ಮುಂದಾಗಬಾರದು. ಪಶ್ಚಿಮಘಟ್ಟದ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ನಿಯೋಗ ಆಗ್ರಹಿಸಿದೆ.






