S Shorts

Kannada Flag ಕರ್ನಾಟಕದಲ್ಲೇ ಕನ್ನಡ ಬಾವುಟ ಅಳವಡಿಕೆಗೆ ಇಲ್ಲವೇ ಅವಕಾಶ? ಕನ್ನಡ ಬಾವುಟಕ್ಕೆ ಮಹಿಳೆ ಅವಮಾನ!

Posted By: Sagaradventure
Updated: Nov 5, 2025 | 6:14 AM

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಕನ್ನಡದ ಕಂಪು ಹರಡುತ್ತಿರುವಾಗಲೇ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.

ತಮ್ಮ ಅಂಗಡಿ ಎದುರು ಕನ್ನಡದ ಧ್ವಜವನ್ನು ಅಳವಡಿಸುವುದಕ್ಕೆ ಯುವತಿಯೊಬ್ಬರು ವಿರೋಧ ವ್ಯಕ್ತಪಡಿಸಿ ರಂಪಾಟ ನಡೆಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಬಾವುಟ ಹಚ್ಚಲು ಬಂದವರೊಂದಿಗೆ ಶ್ರೀಮಾ ಫರ್ನಾಂಡಿಸ್ ಎಂಬ ಯುವತಿ ಜಗಳವಾಡಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

​ಜಯ ಭಾರತ ಸಂಘಟನೆಯ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕಿರವತ್ತಿ ಪ್ರದೇಶದಲ್ಲಿ ಅಲ್ಲಲ್ಲಿ ಕನ್ನಡದ ಬಾವುಟ ಅಳವಡಿಸಲು ಮುಂದಾಗಿದ್ದರು. ಈ ವೇಳೆ, ಶ್ರೀಮಾ ಫರ್ನಾಂಡಿಸ್, ‘ನಾನು ನನ್ನ ಅಂಗಡಿಯ ಎದುರು ಬೋರ್ಡ್ ಅಳವಡಿಸಬೇಕು, ಇಲ್ಲಿ ಬಾವುಟ ಹಚ್ಚಲು ಅವಕಾಶ ನೀಡುವುದಿಲ್ಲ’ ಎಂದು ವಿರೋಧಿಸಿದರು. ಕಾರ್ಯಕರ್ತರಾದ ಕಲ್ಲಪ್ಪ ಹೋಳಿ, ಮಹೇಶ ದಿಂಡ್ವಾರ್, ಅಹ್ಮದ್ ಕೋಳಿಕೇರಿ, ಮತ್ತು ಮೆಹಬೂಬ್ ಅಲಿ ಬೊಮ್ಮಿಘಟ್ಟಿ ಅವರು ರಸ್ತೆಯ ಬೀದಿ ದೀಪದ ಕಂಬಕ್ಕೆ ಧ್ವಜ ಅಳವಡಿಸುವುದಾಗಿ ಮನವಿ ಮಾಡಿದರೂ, ‘ಕನ್ನಡ ಬಾವುಟ ಅಂಟಿಸಿದರೆ ಕಿತ್ತು ಬಿಸಾಕುವುದಾಗಿ’ ಶ್ರೀಮಾ ಫರ್ನಾಂಡಿಸ್ ಉದ್ಧಟತನದ ಮಾತನಾಡಿದ್ದಾರೆ.

​ಪ್ರಾರಂಭದಲ್ಲಿ ಕಾರ್ಯಕರ್ತರು ವಿವಾದ ಬೇಡವೆಂದು ಹಿಂದಿರುಗಿದ್ದರು. ಆದರೆ, ಪುನಃ ಬೇರೆ ಕಾರ್ಯಕರ್ತರು ಧ್ವಜ ಅಳವಡಿಸಲು ಅದೇ ಸ್ಥಳಕ್ಕೆ ತೆರಳಿದಾಗಲೂ ಯುವತಿ ತನ್ನ ಪಟ್ಟು ಸಡಿಲಿಸಲಿಲ್ಲ. ಅಲ್ಲದೆ, ‘ಈ ಏರಿಯಾ ನನ್ನದು, ಇಲ್ಲಿ ಹ್ಯಾಂಗ್ಯೋ ಕಂಪನಿಯ ಬೋರ್ಡ್ ಬರಲಿದೆ’ ಎಂದು ಹೇಳಿ ಕನ್ನಡ ಕಾರ್ಯಕರ್ತರನ್ನು ‘ದಗಲ್ ಬಾಜಿ ಕೆಲಸ ಮಾಡುವವರು’ ಎಂದು ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಪೂರ್ಣ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ರಾಜ್ಯದ ಹಬ್ಬದ ಸಮಯದಲ್ಲಿ ಕನ್ನಡಕ್ಕೆ ಅವಮಾನ ಮಾಡಿದ ಈ ಕೃತ್ಯದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಅನೇಕ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.