ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ನಗರಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಇಂದು(ಅಕ್ಟೋಬರ್ 31) ಅಂತಿಮ ಗಡುವು ನಿಗದಿಯಾಗಿದೆ.
ರಾಜ್ಯದ ಅತಿದೊಡ್ಡ ಸಮೀಕ್ಷೆಯಾಗಿರುವ ಬೆಂಗಳೂರಿನ 44 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆಗಾಗಿ ಸುಮಾರು 22 ಸಾವಿರ ಗಣತಿದಾರರನ್ನು ನೇಮಕ ಮಾಡಲಾಗಿದೆ. ಆದರೆ, ಕಾರ್ಯಾಚರಣೆಯ ಸಮಯದಲ್ಲಿ ಉಂಟಾದ ಗೊಂದಲಗಳ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆ ಮಾಡಿತ್ತು.
ಅಕ್ಟೋಬರ್ 23 ರಿಂದ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಇದರಿಂದಾಗಿ ಗಣತಿ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳದೆ ಉಳಿದಿದೆ. ಇದರ ಜತೆಗೆ ಸರ್ಕಾರ ಆನ್‌ಲೈನ್ ಮೂಲಕ ನಾಗರಿಕರೇ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ನಾಗರಿಕರು ನವೆಂಬರ್ 10ರ ವರೆಗೆ ಆನ್‌ಲೈನ್ ಮೂಲಕ ತಮ್ಮ ಸಾಮಾಜಿಕ-ಶೈಕ್ಷಣಿಕ ಮಾಹಿತಿಯನ್ನು ಖುದ್ದು ದಾಖಲಿಸಬಹುದಾಗಿದೆ.
ನಗರದ ಬಹುಭಾಗಗಳಲ್ಲಿ ಇನ್ನೂ ಗಣತಿ ಪ್ರಕ್ರಿಯೆ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಇಂದು ಸಂಜೆಯ ಒಳಗೆ ಸಾಧ್ಯವಾದಷ್ಟು ಕುಟುಂಬಗಳ ವಿವರ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.






