ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮನೆ ಬಾಗಿಲಿಗೇ ಕಸ ಸುರಿಸುವ ಕಠಿಣ ಕ್ರಮ ಕೈಗೊಂಡಿದ್ದರೆ, ಚಿಕ್ಕಬಳ್ಳಾಪುರ ನಗರಸಭೆಯೂ ಇದೇ ರೀತಿಯ ಪಾಠ ಕಲಿಸುವ ಕೆಲಸ ಮಾಡಿದೆ. ನಗರದ ಕಂದವಾರ ರಸ್ತೆಯಲ್ಲಿ ಬೈಕ್‌ನಲ್ಲಿ ಕಸದ ಚೀಲ ತಂದು ರಸ್ತೆಗೆ ಸುರಿದಿದ್ದ ಯುವಕನ ಬೈಕ್ ಅನ್ನು ನಗರಸಭೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ನಗರಸಭೆ ಪ್ರದೇಶದಲ್ಲಿ ರಸ್ತೆಗೆ ಅಥವಾ ತೆರೆದ ಸ್ಥಳಗಳಲ್ಲಿ ಕಸ ಸುರಿಯುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಇದೇ ಕ್ರಮದ ಭಾಗವಾಗಿ ಕಸ ಎಸೆದ ಯುವಕನನ್ನು ಪ್ರಶ್ನಿಸಿದ ಸಿಬ್ಬಂದಿಗೆ, “ದಂಡ ಕಟ್ಟಲ್ಲ, ಏನ್ ಮಾಡ್ತಿರೋ ಮಾಡ್ಕೊಳ್ಳಿ,” ಎಂದು ಯುವಕ ಪ್ರತಿಕ್ರಿಯಿಸಿದ್ದಾನೆ.
ಸಿಬ್ಬಂದಿಯ ಎಚ್ಚರಿಕೆಗೂ ತಲೆಕೆಡಿಸಿಕೊಳ್ಳದ ಯುವಕನ ನಡವಳಿಕೆಗೆ ಬೇಸತ್ತ ನಗರಸಭೆ ಅಧಿಕಾರಿಗಳು, ತಕ್ಷಣವೇ ಆತನ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರಿಗೆ ಮುಂದಿನ ದಿನಗಳಲ್ಲಿ ಇದು ಪಾಠವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ನಗರದ ಸ್ವಚ್ಛತೆಯನ್ನು ಕಾಪಾಡಲು ಮುಂದಿನ ದಿನಗಳಲ್ಲಿ ಇಂತಹ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ನಗರಸಭೆ ತಿಳಿಸಿದೆ.






