Home State Politics National More
STATE NEWS

ಸದ್ಯಕ್ಕೆ ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ: ಸಚಿವ ಎಂ.ಸಿ.ಸುಧಾಕರ್

Siddaramaiah is currently the CM, DK Shivakumar is the DCM
Posted By: Sagaradventure
Updated on: Oct 31, 2025 | 4:23 PM

ಬೆಂಗಳೂರು: “ನವೆಂಬರ್ ಕ್ರಾಂತಿಯಲ್ಲ, ಅದು ಬರೇ ಬ್ರಾಂತಿ” ಎಂದು ನಾನು ಹಲವಾರು ಬಾರಿ ಸ್ಪಷ್ಟಪಡಿಸಿದ್ದೇನೆ. ಮಾಧ್ಯಮದ ತಪ್ಪು ಎಂದಲ್ಲ, ಆದರೆ ಎಲ್ಲೋ ಯಾರೋ ಹೇಳಿದ ವಿಷಯ ದೊಡ್ಡ ಸುದ್ದಿಯಾಗಿದೆ” ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದರು.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಐಡಿಎ 51ನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ. ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ಮುಖ್ಯಮಂತ್ರಿಯ ಸ್ಥಾನ ಎಲ್ಲರಿಗೂ ಬಯಸುವಂತದ್ದು ಸಹಜ, ಆದರೆ ಅದು ಖಾಲಿ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಬಯಸಿದರೆ ಸಿಎಂ ಪೂರ್ಣ 5 ವರ್ಷ ಪೂರೈಸುತ್ತಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಸ್ಪಷ್ಟಪಡಿಸಿದರು.

ಇನ್ನು ಆರ್‌ಎಸ್‌ಎಸ್ ವಿರುದ್ಧ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಆರ್‌ಎಸ್‌ಎಸ್‌ನ ಉದ್ದೇಶವಿಟ್ಟು ಸುತ್ತೋಲೆ ಹೊರಡಿಸಲಿಲ್ಲ. ಈ ಹಿಂದೆ ಜಗದೀಶ ಶೆಟ್ಟರ್ ಅವರ ಕಾಲದಲ್ಲೇ ಯಾವುದೇ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಅನುಮತಿ ಪಡೆಯಬೇಕು ಎಂಬ ನಿಬಂಧನೆ ಇತ್ತು. ಅದೇ ಕ್ರಮವನ್ನು ಈಗ ಮರು ಜಾರಿಗೆ ತರಲಾಗಿದೆ,” ಎಂದರು.

“ಪ್ರಿಯಾಂಕ್ ಖರ್ಗೆಯವರ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ರಾಜಕೀಯ ಬಣ್ಣ ನೀಡಲಾಗಿದೆ, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಎಲ್ಲಾ ಸಂಘಟನೆಗಳು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಲು ಈ ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದರು.

ಇನ್ನು ಧರ್ಮಸ್ಥಳದ ಎಸ್‌ಐಟಿ ತನಿಖೆ ಕುರಿತ ಪ್ರಶ್ನೆಗೆ ಉತ್ತರಿಸಿ, “ಧರ್ಮಸ್ಥಳದ ಮೇಲೆ ನಮಗೆ ಗೌರವವಿದೆ. ಕ್ಷೇತ್ರದ ಮೇಲಿನ ಕಳಂಕ ತೊಡೆದುಹಾಕಲು ಸರಕಾರ ಎಸ್‌ಐಟಿ ರಚಿಸಿತ್ತು. ತನಿಖೆ ಆರಂಭದಲ್ಲಿ ಎಲ್ಲರೂ ಸ್ವಾಗತಿಸಿದರೂ, ಈಗ ಯಾವುದೇ ಸಾಕ್ಷಿ ಸಿಕ್ಕಿಲ್ಲವೆಂದು ಸರಕಾರದ ಮೇಲೆ ಟೀಕೆಗಳು ನಡೆಯುತ್ತಿವೆ. ಇದು ರಾಜಕೀಯ ಉದ್ದೇಶದಿಂದ ನಡೆಯುತ್ತಿರುವ ಪ್ರಯತ್ನ, ಆರ್‌ಎಸ್‌ಎಸ್ ವಿಚಾರದಲ್ಲೂ ಸರಕಾರದ ಮೇಲೆ ಕೆಟ್ಟ ಹೆಸರು ತರಲು ಪ್ರಯತ್ನವಾಗುತ್ತಿದೆ,” ಎಂದು ಸಚಿವರು ಆರೋಪಿಸಿದರು.

Shorts Shorts