ಕಾಶೀಬುಗ್ಗ (ಆಂಧ್ರಪ್ರದೇಶ): ಇಲ್ಲಿನ ಶ್ರೀಕಾಕುಳಂ ಜಿಲ್ಲೆಯ ಕಾಶೀಬುಗ್ಗದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Swamy Temple, Kasibugga) ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 9 ಮಂದಿ ಭಕ್ತರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ತಿಕ ಮಾಸದ ಏಕಾದಶಿಯ ಶುಭದಿನದಂದು ದೇವಸ್ಥಾನದಲ್ಲಿ ಉಂಟಾದ ಈ ದುರಂತ ದೇಶಾದ್ಯಂತ ಆಘಾತ ಮೂಡಿಸಿದೆ.
ನೂಕುನುಗ್ಗಲಿಗೆ ಕಾರಣವೇನು?: ಕಾರ್ತಿಕ ಮಾಸದ ಏಕಾದಶಿ (Ekadashi) ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಸಾಮಾನ್ಯಕ್ಕಿಂತ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸ್ಥಳೀಯ ವರದಿಗಳ ಪ್ರಕಾರ, ಸುಮಾರು 5,000ಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದರು. ಅತಿ ಹೆಚ್ಚು ಜನಸಂದಣಿಯಿಂದಾಗಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಹಠಾತ್ ನೂಕುನುಗ್ಗಲು ಉಂಟಾಗಿದೆ.
ರಕ್ಷಣಾ ವೈಫಲ್ಯ ಶಂಕೆ: ದಟ್ಟಣೆ ಹೆಚ್ಚಾದಾಗ ಅಲ್ಲಿ ನಿಯೋಜಿಸಲಾಗಿದ್ದ ದೇವಸ್ಥಾನದ ಸಿಬ್ಬಂದಿ ಮತ್ತು ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಕೆಲ ವರದಿಗಳ ಪ್ರಕಾರ, ರಕ್ಷಣಾ ಬೇಲಿಯೊಂದು ಕುಸಿದು ಬಿದ್ದಿದ್ದೇ ಕಾಲ್ತುಳಿತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಕಾಲ್ತುಳಿತದಲ್ಲಿ ಸಿಲುಕಿ ಮಹಿಳೆಯರು ಸೇರಿದಂತೆ ಕನಿಷ್ಠ 9 ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






