ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳಸಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹೇಳಿದರು.
ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಭಾಷೆಯಲ್ಲಿ ನಮ್ಮನ್ನು ಮಾತನಾಡಿಸಿದರೂ ಕನ್ನಡದಲ್ಲಿಯೇ ಉತ್ತರ ನೀಡಬೇಕು. ಮನ ಮನೆಗಳಲ್ಲಿಯೂ ಕನ್ನಡ ಹೆಸರಾಗಬೇಕು. ಹಾಗೂ ಕನ್ನಡ ಉಳಿವಿಗಾಗಿ ಹಾಗೂ ಕನ್ನಡದ ಏಳಿಗೆಗಾಗಿ ಶಪಥ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರನ್ನು ಸ್ಮರಿಸಿದರು. ನಾನು ಮತ್ತು ವಾಟಾಳ್ ನಾಗರಾಜ್ ಒಂದೇ ಜಿಲ್ಲೆಯವರು. ನನಗಿಂತ ದೊಡ್ಡವರು ಇರಬೇಕು. ಆದರೆ ಅವರು ತಮ್ಮ ವಯಸ್ಸನ್ನ ಎಲ್ಲೂ ಹೇಳುವುದಿಲ್ಲ ಎಂದು ಹಾಸ್ಯ ಚಟಾಕಿ ಹೇಳಿದರು.
ನನಗೆ ಇನ್ನೂ ನೆನಪಿದೆ ನಾನು ಫೈನಲ್ ಬಿಎಸ್ಸಿ ಓದುತ್ತಿದ್ದಾಗ ವಾಟಾಳ್ ನಾಗರಾಜ್ ಎಂಎಲ್‌ಎ ಆಗಿದ್ದರು. ಮತ್ತು ವಿದ್ಯಾರ್ಥಿ ದಿನಗಳಲ್ಲಿ ವಾಟಾಳ್ ಅವರ ಭಾಷಣಗಳನ್ನು ಕೇಳಲು ಹೋಗುತ್ತಿದ್ದೆ. ವಾಟಾಳ್ ನಾಗರಾಜ್ ರಾಜಕೀಯ ಸ್ಥಾನಕ್ಕಾಗಿ ಒತ್ತಾಯ ಮಾಡದೆ, ಕನ್ನಡ ಹೋರಾಟಗಾರನಾಗಿ ತಮ್ಮ ಜೀವನವನ್ನು ಮೀಸಲು ಮಾಡಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ದೇವರಾಜ ಅರಸು ಅವರು ಸಚಿವ ಸ್ಥಾನ ನೀಡಲು ಆಹ್ವಾನಿಸಿದಾಗ, ವಾಟಾಳ್ ಅವರು ಕನ್ನಡ ಹೋರಾಟಗಾರನಾಗಿ ಉಳಿಯುತ್ತೇನೆ ಎಂದು ನಿರ್ಧರಿಸಿದ್ದು ನಿಜವಾಗಲೂ ದೊಡ್ಡ ಸಂಗತಿ. ದೇವರಾಜ ಅರಸಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಾಗುತ್ತದೆ ಹಾಗೂ ಇದರ ಬಗ್ಗೆ ಸಿಂಡಿಕೇಟ್ ನಲ್ಲಿ ನಿರ್ಧಾರ ಆಗಬೇಕು ಎಂದರು.
ನನಗೂ ಡಾಕ್ಟರೇಟ್ ಕೊಡ್ತೀನಿ ಅಂದ್ರು. ಆದರೆ ಅದು ನನಗೆ ಬೇಡ ಅಂದೆ. ಖುಷಿಗೋಸ್ಕರ, ಶೋಕಿಗೋಸ್ಕರ ಡಾಕ್ಟರೇಟ್ ತೆಗೆದುಕೊಳ್ಳೋದು ಅಲ್ಲ ಅವರ ಸಾಧನೆಯನ್ನ ಪರಿಗಣಿಸಿ ಅವರಿಗೆ ಕೊಡುವಂತಹದ್ದು ಎಂದು ಹೇಳಿದರು.
ಈ ಸಂದರ್ಭದಲ್ಲೇ ದ್ವಿಭಾಷಾ ನೀತಿ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ದ್ವಿಭಾಷಾ ಪರವಾಗಿದ್ದರೂ, ಭಾಷಾ ನೀತಿ ಕುರಿತ ನಿರ್ಧಾರ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದರು.






