ಸಾಕಷ್ಟು ಬಾರಿ ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಕೆಳಗಿನ ಆಸನ(Lower berth) ಕಾಯ್ದಿರಿಸಲು ಶ್ರಮವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ಸೀಟು ಬುಕ್ಕಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಇತ್ತೀಚೆಗಷ್ಟೇ ರೈಲು ಸೇವೆಗಳನ್ನು ಒಂದೇ ವೇದಿಕೆಯಡಿ ನೀಡಲು ಭಾರತೀಯ ರೈಲ್ವೇ ವತಿಯಿಂದ RailOne ಆ‌್ಯಪ್‌ನ್ನು ಬಿಡುಗಡೆಗೊಳಿಸಿತ್ತು. ಇದೀಗ ಪ್ರಯಾಣಿಕರ ಪ್ರಯಾಣದ ಅನುಭವ ಸುಗಮಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕೆಳ ಸೀಟು (ಲೋಯರ್ ಬರ್ಥ್) ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ನಿಯಮಗಳು ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕಲ ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿವೆ.
ಹಿರಿಯರು, ಮಹಿಳೆಯರಿಗೆ ಆದ್ಯತೆ:
ಹೊಸ ಕಾಯ್ದಿರಿಸುವಿಕೆ ನಿಯಮದ ಪ್ರಕಾರ, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕಲ ಪ್ರಯಾಣಿಕರಿಗೆ ಕೆಳ ಸೀಟು ಲಭ್ಯವಿದ್ದರೆ ಮೊದಲ ಆದ್ಯತೆ ನೀಡಲಾಗುತ್ತದೆ. ಜೊತೆಗೆ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ವಯಂಚಾಲಿತವಾಗಿ ಕೆಳ ಸೀಟು ಮೀಸಲಿಡುವ ವ್ಯವಸ್ಥೆಯನ್ನೂ ಸೇರಿಸಲಾಗಿದೆ.
ಟಿಟಿಇಗೆ ಹೊಸ ಅಧಿಕಾರ:
ಪ್ರಯಾಣದ ಸಮಯದಲ್ಲಿ ಮಧ್ಯ ಅಥವಾ ಮೇಲ್ಸೀಟು ಬಂದ ಹಿರಿಯ ಪ್ರಯಾಣಿಕರಿಗೆ, ಖಾಲಿ ಇರುವ ಕೆಳ ಸೀಟುಗಳನ್ನು ಟಿಕೆಟ್ ಪರೀಕ್ಷಕರಿಗೆ(TTE) ಹಂಚುವ ಅಧಿಕಾರ ನೀಡಲಾಗಿದೆ.
ನಿದ್ರೆ ಮತ್ತು ಆಸನ ಸಮಯ:
ರಿಸರ್ವೇಶನ್ ಬೋಗಿಗಳಲ್ಲಿ ನಿದ್ರೆ ಮಾಡಲು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದ ಸಮಯದಲ್ಲಿ ಪ್ರಯಾಣಿಕರು ಆಸನವನ್ನು ಕುಳಿತುಕೊಳ್ಳಲು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ.
ಆರ್‌ಎಸಿ (RAC) ಪ್ರಯಾಣಿಕರ ಹೊಸ ವ್ಯವಸ್ಥೆ:
ಆರ್‌ಎಸಿ ಟಿಕೆಟ್ ಪಡೆದ ಪ್ರಯಾಣಿಕರಲ್ಲಿ, ಸೈಡ್ ಲೋಯರ್ ಹಾಗೂ ಸೈಡ್ ಅಪರ್ ಸೀಟು ಪಡೆದವರು ಹಗಲು ಸಮಯದಲ್ಲಿ ಆಸನವನ್ನು ಹಂಚಿಕೊಳ್ಳಬೇಕಾಗುತ್ತದೆ. ಆದರೆ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಕೆಳ ಸೀಟು ಆ ಪ್ರಯಾಣಿಕರ ನಿದ್ರಾ ಸ್ಥಳವಾಗಿರುತ್ತದೆ.
ಕೆಳ ಸೀಟು ಆಯ್ಕೆ, ಲಭ್ಯತೆ ಆಧಾರಿತ:
ಕೆಳ ಸೀಟು ಬಯಸುವ ಪ್ರಯಾಣಿಕರು, ಅದು ಖಾಲಿ ಇದ್ದರೆ ಮಾತ್ರ ಆಯ್ಕೆಮಾಡಬಹುದಾಗಿದೆ. ರಿಸರ್ವೇಶನ್ ವ್ಯವಸ್ಥೆ ಸೀಟು ಲಭ್ಯತೆ ಮತ್ತು ಪ್ರಯಾಣಿಕರ ವರ್ಗದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸೀಟು ಹಂಚಿಕೆ ಮಾಡುತ್ತದೆ.
ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ಪ್ರಯಾಣಿಕರ ಸ್ನೇಹಿ ಪ್ರಯಾಣ ಕಲ್ಪಿಸುವ ಉದ್ದೇಶದಿಂದ ಹಾಗೂ ಎಲ್ಲರಿಗೂ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಜಾರಿಗೊಳಿಸಿದೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.






