ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ತಮ್ಮ ಅಮೋಘ ಪ್ರದರ್ಶನದಿಂದ ಇಡೀ ಕ್ರಿಕೆಟ್ ಲೋಕವನ್ನೇ ತಮ್ಮತ್ತ ತಿರುಗುವಂತೆ ಮಾಡಿದ ಯುವ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಇದೀಗ ಭಾರತೀಯ ಕ್ರಿಕೆಟ್‌ನ ಹಾಟ್ ಟಾಪಿಕ್.
22 ಯಾರ್ಡ್ ಪಿಚ್‌ನಲ್ಲಿ ಮಿಂಚಿನಂತೆ ಓಡುತ್ತಾ, ಸ್ಕೋರ್ ಬೋರ್ಡ್‌ಗೆ ನಿರಂತರವಾಗಿ ಚಲನೆ ನೀಡುವ ಈ 25ರ ಹರೆಯದ ತಾರೆಯ ಹಿಂದಿದೆ ಕರ್ನಾಟಕದ ಕರಾವಳಿ ಭಾಗದಿಂದ ಮುಂಬೈಗೆ ಹೊರಟ ಒಂದು ಕನಸಿನ ಕಥೆ. ಜೆಮಿಮಾ ರೋಡ್ರಿಗಸ್ ಮೂಲತಃ ಮುಂಬೈ ನಿವಾಸಿಗಳಾದರೂ, ಅವರ ಕುಟುಂಬದ ಬೇರುಗಳು ಇರುವುದು ಕರ್ನಾಟಕದ ಕರಾವಳಿ ಭಾಗದಲ್ಲಿ—ಅಂದರೆ ಮಂಗಳೂರಿನಲ್ಲಿ!
ಸ್ಥಳಾಂತರದ ಉದ್ದೇಶ: ರೋಮನ್ ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದ ಜೆಮಿಮಾ ಅವರ ಪೂರ್ವಜರು ಮಂಗಳೂರಿನವರು. ಆದರೆ, ತಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ದೊರೆಯಬಹುದು ಎಂಬ ಆಸೆಯಿಂದ ಕುಟುಂಬವು ಮಂಗಳೂರಿನಿಂದ ಮಹಾರಾಷ್ಟ್ರದ ಮಾಯಾನಗರಿ ಮುಂಬೈಗೆ ವಲಸೆ ಹೋಯಿತು. ದೊಡ್ಡ ಕನಸಿನ ಬೆನ್ನು ಹತ್ತಿ ಪ್ರಯಾಣ ಬೆಳೆಸಿದ ಈ ಕುಟುಂಬ ಅಂತಿಮವಾಗಿ ಮುಂಬೈನಲ್ಲಿ ನೆಲೆಯೂರಿತು. ಸೆಪ್ಟೆಂಬರ್ 5, 2000ರಂದು ಮುಂಬೈನಲ್ಲಿ ಜನಿಸಿದ ಜೆಮಿಮಾ ರೋಡ್ರಿಗಸ್, ಅಲ್ಲೇ ತಮ್ಮ ವಿದ್ಯಾಭ್ಯಾಸ ಮತ್ತು ಕ್ರಿಕೆಟ್ ಅಭ್ಯಾಸವನ್ನು ಆರಂಭಿಸಿದರು.
ತಂದೆಯೇ ಗುರು: ಜೆಮಿಮಾ ಅವರ ತಂದೆ ಇವಾನ್ ರೋಡ್ರಿಗಸ್, ಹಿಂದೆ ಕ್ಲಬ್ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದವರು. ಸದ್ಯಕ್ಕೆ ಅವರು ಜೂನಿಯರ್ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಜೆಮಿಮಾ ಅವರ ಕ್ರಿಕೆಟ್ ಪ್ರೀತಿಗೆ ಆರಂಭದಲ್ಲಿ ನೀರೆರೆದವರು ಅವರ ತಂದೆಯೇ. ಗ್ರೌಂಡ್‌ನಲ್ಲಿ ಮಗಳು ಬೆವರು ಹರಿಸುವಾಗ ತಂದೆಯೇ ಬೆನ್ನೆಲುಬಾಗಿ ನಿಂತು ಪೋಷಿಸಿದರು. ತಾಯಿ ಲವಿತಾ ರೋಡ್ರಿಗಸ್ ಇವರ ಶ್ರಮಕ್ಕೆ ಯಾವಾಗಲೂ ಬೆಂಬಲವಾಗಿ ನಿಂತವರು.
ವಿಶ್ವವೇ ಬೆರಗು!: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ನೀಡಿದ ಅಮೋಘ ಬ್ಯಾಟಿಂಗ್ ಪ್ರದರ್ಶನ ತಂಡದ ಗೆಲುವಿಗೆ ನಿರ್ಣಾಯಕವಾಯಿತು. ಸವಾಲಿನ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಭಾರತ ಮಹಿಳಾ ತಂಡವು, ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಜೆಮಿಮಾ ಅವರ ಈ ಕಮಾಲ್ ಪ್ರದರ್ಶನವನ್ನು ಕಂಡು ಕ್ರಿಕೆಟ್ ದಿಗ್ಗಜರೂ ಮೆಚ್ಚುಗೆ ಸೂಚಿಸಿದ್ದಾರೆ.
ಮಂಗಳೂರಿನಿಂದ ಶುರುವಾದ ಕುಟುಂಬದ ಕನಸಿನ ಓಟ, ಇಂದು ಜೆಮಿಮಾ ಅವರನ್ನು ವಿಶ್ವ ಕ್ರಿಕೆಟ್‌ನ ವೇದಿಕೆಯಲ್ಲಿ ಯಶಸ್ಸಿನ ಶಿಖರಕ್ಕೆ ಏರಿಸಿದೆ.






