Home State Politics National More
STATE NEWS

ರಾಜ್ಯೋತ್ಸವದಂದೇ ಬೆಳಗಾವಿಯಲ್ಲಿ MES ಪುಂಡಾಟಿಕೆ: ಪೊಲೀಸರ ವರ್ತನೆಗೆ ಕನ್ನಡಿಗರ ಆಕ್ರೋಶ!

MES riots in Belgaum on Rajyotsava celebration
Posted By: Sagaradventure
Updated on: Nov 1, 2025 | 7:45 AM

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಹೊತ್ತಿನಲ್ಲೇ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ(ಎಂಇಎಸ್) ಕಾರ್ಯಕರ್ತರು ಮತ್ತೆ ತಮ್ಮ ಉದ್ಧಟತನ ತೋರಿದ್ದಾರೆ. ಸಂಭಾಜಿ ಮೈದಾನದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಅನಧಿಕೃತ ರ್ಯಾಲಿ ನಡೆಸಿದ ಎಂಇಎಸ್ ಪುಂಡರ ವರ್ತನೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಇದಲ್ಲದೇ, ನಾಡದ್ರೋಹಿ ಎಂಇಎಸ್ ನಾಯಕರೊಂದಿಗೆ ಮಾಳಮಾರುತಿ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ಅವರು ಸೆಲ್ಫಿ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ರ್ಯಾಲಿ ನಂತರ ತೆಗೆದ ಈ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಕನ್ನಡಿಗರ ಭಾವನೆಗೆ ಬೆಳಗಾವಿ ಪೊಲೀಸರು ಧಕ್ಕೆ ತಂದ್ರಾ?” ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.

ಸಂಭಾಜಿ ಮೈದಾನದಲ್ಲಿ ಎಂಇಎಸ್ ನಾಯಕರ ಜೊತೆ ಸಿಪಿಐ ಪೋಸ್ ನೀಡಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯೋತ್ಸವದ ದಿನವೇ ನಾಡದ್ರೋಹಿ ಚಟುವಟಿಕೆ ನಡೆಸಿದವರೊಂದಿಗೆ ಪೊಲೀಸ್ ಅಧಿಕಾರಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿರುವುದು ಖಂಡನೀಯ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ರ್ಯಾಲಿಯಲ್ಲಿ ಪುಟ್ಟ ಮಕ್ಕಳನ್ನೂ ಬಳಕೆ ಮಾಡಿರುವುದನ್ನು ಕನ್ನಡಪರ ಸಂಘಟನೆಗಳು ಗಂಭೀರವಾಗಿ ತೆಗೆದುಕೊಂಡಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.

Shorts Shorts