ಮೈಸೂರು: ಜಿಲ್ಲೆಯಲ್ಲಿ ನಡೆದ ದುರ್ಘಟನೆ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ತಾಯಿಯೊಬ್ಬರು ಇಬ್ಬರು ಬಾಲಕಿಯರ ಜೀವ ತೆಗೆಯುವ ಭೀಕರ ಕೃತ್ಯ ಎಸಗಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಸಂಬ್ರನ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದಲ್ಲಿ ಉಂಟಾದ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಂಬ್ರನ ಅವರು ಕೇವಲ 10 ದಿನದ ಶಿಶು ಹಾಗೂ 5 ವರ್ಷದ ಹೆಣ್ಣು ಮಗಳ ಕತ್ತು ಕೊಯ್ದು ಕೊಲೆ ಮಾಡಿದ ನಂತರ, ಅದೇ ಚಾಕುವಿನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೆಟ್ಟದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.






