ಆಂಧ್ರಪ್ರದೇಶ: ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ದೇಗುಲದಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುಕುಂದ್ ರಾಜ್ ಪಾಂಡಾ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಖಾಸಗಿ ಜಾಗದಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ನಿರ್ಮಿಸಲಾದ ಈ ದೇಗುಲದಲ್ಲಿ ಲಕ್ಷಾಂತರ ಭಕ್ತರು ದೀಪಾವಳಿ ಸಂದರ್ಭದ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ದೇಗುಲ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ದಾರಿಯಿದ್ದುದರಿಂದ ಅತಿಯಾದ ಜನದಟ್ಟಣೆ ಉಂಟಾಗಿ ಅವ್ಯವಸ್ಥೆ ಹೆಚ್ಚಾಗಿತ್ತು.
ಅಂದಾಜು ಮೂರರಿಂದ ನಾಲ್ಕು ಸಾವಿರ ಭಕ್ತರು ಕಿರಿದಾದ ಸ್ಥಳದಲ್ಲಿ ಒಂದೇ ವೇಳೆ ಸೇರಿದ್ದರಿಂದ ಕಬ್ಬಿಣದ ಗ್ರಿಲ್ ಕುಸಿದು ಜನರು ಸುಮಾರು ಏಳು ಅಡಿ ಎತ್ತರದಿಂದ ಬಿದ್ದರು. ಈ ದುರಂತದಲ್ಲಿ ಎಂಟು ಮಹಿಳೆಯರು ಹಾಗೂ ಒರ್ವ ಬಾಲಕ ಮೃತಪಟ್ಟಿದ್ದಾರೆ.
ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ ತೋರಿದ ದೇಗುಲ ಟ್ರಸ್ಟಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಮುನ್ನ ಯಾವುದೇ ಭದ್ರತಾ ಕ್ರಮ ಕೈಗೊಳ್ಳದೇ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ನಿರ್ಲಕ್ಷ್ಯವೂ ಬೆಳಕಿಗೆ ಬಂದಿದೆ. ಶ್ರೀಕಾಕುಳಂ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.






