Home State Politics National More
STATE NEWS

Controversial Remarks: ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ!

Kaadasiddeshwara
Posted By: StateNews Desk
Updated on: Nov 1, 2025 | 7:56 AM

ಬೆಂಗಳೂರು: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕನೇರಿ ಮಠದ ಪೀಠಾಧಿಪತಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ವಿರುದ್ಧ ₹1 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಅಲ್ಲದೆ, ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದರಿಂದ ಸ್ವಾಮೀಜಿ ಅವರನ್ನು ನಿರ್ಬಂಧಿಸಿ ನ್ಯಾಯಾಲಯವು ಮಹತ್ವದ ತಡೆಯಾಜ್ಞೆ ನೀಡಿದೆ.

ಮೊಕದ್ದಮೆಯ ಹಿನ್ನೆಲೆ ಮತ್ತು ಆರೋಪ: ರಾಜ್ಯಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ದ ನೇತೃತ್ವ ವಹಿಸಿರುವ 300ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರ ಒಕ್ಕೂಟವು, ಕಾಡಸಿದ್ಧೇಶ್ವರ ಸ್ವಾಮೀಜಿ ತಮ್ಮ ವಿರುದ್ಧ ಅಶ್ಲೀಲ ಮತ್ತು ಮಾನಹಾನಿಕರ ಪದಗಳನ್ನು ಬಳಸಿರುವುದಾಗಿ ಆರೋಪಿಸಿ ಈ ಮೊಕದ್ದಮೆ ಹೂಡಿತ್ತು.

ಮೊಕದ್ದಮೆಯ ವಿಚಾರಣೆ ನಡೆಸಿದ ಬೆಂಗಳೂರಿನ 30ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎನ್. ಆರ್. ಮಧು ಅವರ ನ್ಯಾಯಾಲಯವು ಶುಕ್ರವಾರ (ನ. 1) ತಾತ್ಕಾಲಿಕ ಪ್ರತಿಬಂಧಕಾದೇಶ (Temporary Injunction Order) ಹೊರಡಿಸಿದೆ.

ನಿರ್ಬಂಧ, ನೋಟಿಸ್: ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆವರೆಗೆ, ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ಸಾರ್ವಜನಿಕವಾಗಿ, ಮುದ್ರಣ ಮಾಧ್ಯಮ, ಡಿಜಿಟಲ್‌ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮಾನಹಾನಿಕರ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿದೆ. ಇದರ ಜೊತೆಗೆ, ಅರ್ಜಿ ಸಂಬಂಧ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿದೆ.

ಸ್ವಾಮೀಜಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು: ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಡಸಿದ್ಧೇಶ್ವರ ಸ್ವಾಮೀಜಿ, ಕೆಲವು ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ”ಕಳೆದ ಎರಡು ತಿಂಗಳುಗಳಿಂದ ‘ದೇವಾಲಯಕ್ಕೆ ಹೋಗಬೇಡಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟದ ಕಲಾವಿದರು ಸೇರಿ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ,” ಎಂದು ಟೀಕಿಸಿದ್ದರು.

“ಗುಡಿಯಲ್ಲಿ ದೇವರಿಲ್ಲ. ಮನೆಯಲ್ಲಿನ ದೇವರನ್ನು ಹೊರಗೆ ಹಾಕಿ ಎನ್ನುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳಬೇಕು,” ಎಂದು ಕೆಲ ಅಸಂವಿಧಾನಿಕ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಒಕ್ಕೂಟವು ಶ್ರೀಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

Shorts Shorts