ಬೆಂಗಳೂರು: ರಾಜ್ಯ ಸರ್ಕಾರದ ಸುರಂಗ ರಸ್ತೆ (ಟನಲ್) ಯೋಜನೆ ವಿರೋಧಿಸಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಲಾಲ್ ಬಾಗ್‌ನಲ್ಲಿ ಜನಜಾಗೃತಿ ಮತ್ತು ಮೌನ ಪ್ರತಿಭಟನೆ ನಡೆಸಿತು. ಈ ವೇಳೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಬಿಜೆಪಿ ಮುಖಂಡರು, ಸರ್ಕಾರದ ಯೋಜನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಲಾಲ್ ಬಾಗ್‌ಗೆ ಗುಂಡಿ ತೋಡುವ ಕೆಲಸ: ಲಾಲ್ ಬಾಗ್ ಬಳಿ ಜನರೊಂದಿಗೆ ಸಂವಾದ ನಡೆಸಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸರ್ಕಾರ ಸಸ್ಯಕಾಶಿಗೆ (ಲಾಲ್ ಬಾಗ್‌ಗೆ) ಗುಂಡಿ ತೋಡುತ್ತಿದೆ. ಬೆಂಗಳೂರಿನ ಎಲ್ಲಾ ಪಾರ್ಕ್ ಮತ್ತು ಕೆರೆಗಳನ್ನು (ಲೇಕ್) ಹುಡುಕುತ್ತಿದ್ದಾರೆ. ಇದು ಮನೆಹಾಳು ಕೆಲಸ ಅಲ್ವಾ? ಎಂದು ಪ್ರಶ್ನಿಸಿದರು.
“ಇದು ಬೆಂಗಳೂರಿನ ಶ್ವಾಸಕೋಶವಿದ್ದ ಹಾಗೆ. ಕೆಂಪೇಗೌಡರ ಆಶಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗಬೇಕು” ಎಂದು ಅವರು ಕರೆ ನೀಡಿದರು. “ನಾವು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಸುರಂಗ ಯೋಜನೆಯಿಂದ ಪರಿಸರ ಹಾಳಾಗುತ್ತೆ” ಎಂದು ಅಶೋಕ್ ತಿಳಿಸಿದರು.
“ಇದು ಟ್ವಿನ್ ಟನಲ್ ಅಲ್ಲ, ವಿಐಪಿ ಕಾರಿಡಾರ್ ಆಗುತ್ತೆ” ಎಂದು ಯೋಜನೆಗೆ ಅಶೋಕ್ ಅವರು ಹೊಸ ವ್ಯಾಖ್ಯಾನ ನೀಡಿದರು. “ಒಂದು ಕಿ.ಮೀ. ಸುರಂಗ ರಸ್ತೆ ಮಾಡುವ ಬದಲು, ಐದು ಕಿ.ಮೀ. ಮೆಟ್ರೋ ಮಾರ್ಗ ಮಾಡಬಹುದು. 60 ಸಾವಿರ ಜನ ಹೋಗಬಹುದಾದ ಮೆಟ್ರೋದಲ್ಲಿ ಸಾಗಬಹುದು, ಆದರೆ ಸುರಂಗ ಮಾರ್ಗ ಮೂಲಕ ಕೇವಲ ಒಂದು ಸಾವಿರ ಜನಓಡಾಡಬಹುದು. ಮೆಟ್ರೋ ಮಾರ್ಗ ಮಾಡಿ, ಪರಿಸರವೂ ಹಾಳಾಗುವುದಿಲ್ಲ” ಎಂದು ಅಶೋಕ್ ಸಲಹೆ ನೀಡಿದರು.
ಆರ್ಥಿಕ ಹೊರೆ ಮತ್ತು ಅವಾಸ್ತವಿಕ ಯೋಜನೆ:
ಟನಲ್ ಯೋಜನೆ ವಿತ್ತೀಯ ಹೊರೆಯ ಕುರಿತು ವಾಗ್ದಾಳಿ ನಡೆಸಿದ ಅಶೋಕ್, “ಟನಲ್ ರಸ್ತೆಯಲ್ಲಿ ಟ್ರಾವೆಲ್ ಮಾಡಿದರೆ ತಿಂಗಳಿಗೆ 20 ಸಾವಿರ ಹಣ ಪಾವತಿಸಬೇಕಾಗುತ್ತೆ. ತಿಂಗಳಿಗೆ 20 ಸಾವಿರ ಕೊಟ್ಟರೆ ಒಂದು ಬೆಂಜ್ ಕಾರ್ ಖರೀದಿಸಬಹುದು ಅಥವಾ ಮೂರು ಬೆಡ್ ರೂಮ್ ವಿಲ್ಲಾ ಖರೀದಿಸಬಹುದು. ಇದೆಲ್ಲಾ ಸವಾರರು ಪೆ ಮಾಡೋಕೆ ಆಗುತ್ತಾದಾ?” ಎಂದು ಪ್ರಶ್ನಿಸಿದರು.
“ಟನಲ್ ಆಸ್ತಿ ಅಡಮಾನ ಇಟ್ಟು ಮಾಡುವ ಪ್ರಾಜೆಕ್ಟ್ ಅಲ್ಲ. ನಿಮ್ಮ ಹತ್ರ ಮೊದಲೇ ದುಡ್ಡು ಇಲ್ಲ. ಟನಲ್ ಮಾಡುವವನೂ ಸಹ ನಾಳೆ ಆತ್ಮಹತ್ಯೆ ಮಾಡ್ಕೊಬೇಕಾಗತ್ತೆ. ಸರ್ಕಾರ ಪಾಪರ್ ಆಗಿದೆ” ಎಂದು ಟೀಕಿಸಿದರು. “ಮೊದಲು ಬೆಂಗಳೂರಿನಲ್ಲಿರುವ ಗುಂಡಿ ಮುಚ್ಚಿ, ನಂತರ ಚಂದ್ರಲೋಕಕ್ಕೆ ಟನಲ್ ಮಾಡಿ” ಎಂದು ವ್ಯಂಗ್ಯವಾಡಿದರು.
ಯೋಜನೆಯ ಸಮಯದ ಬಗ್ಗೆ ಮಾತನಾಡಿದ ಅಶೋಕ್, “ಈ ಎರಡೂವರೆ ವರ್ಷದ ಅವಧಿಯಲ್ಲಿ ಟನಲ್ ಮಾಡಿ ಮುಗಿಸೋಕೆ ಆಗಲ್ಲ. ಮುಂದಿನ ಸರ್ಕಾರ ಬೇಡ ಎಂದು ತೀರ್ಮಾನ ಮಾಡಿದರೆ ಆ ಮಷಿನ್ ಗುಜರಿ ಅಂಗಡಿಗೆ ಹಾಕಬೇಕು. ನಾವು ಅಭಿವೃದ್ಧಿ ವಿರೋಧಿ ಅಲ್ಲ. ಆದರೆ, ಈ ಯೋಜನೆ ಮಂಗಳ ಗ್ರಹಕ್ಕೆ ಹೋಗೋದಕ್ಕಿಂತ ಕಾಸ್ಟ್ಲಿ” ಎಂದು ಅಭಿಪ್ರಾಯಪಟ್ಟರು.






