ಬೆಳಗಾವಿ: ನಾಲ್ಕು ತಾಲೂಕುಗಳ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಅಕ್ಟೋಬರ್ 19ರಂದು ನಡೆದಿದ್ದ ಈ ಚುನಾವಣೆಯ ಫಲಿತಾಂಶ ಕೋರ್ಟ್ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ತಡವಾಗಿ ಪ್ರಕಟಗೊಂಡಿದೆ. ಇದೀಗ ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕುಗಳ ಫಲಿತಾಂಶ ಹೊರಬಿದ್ದಿದೆ.
ಬೈಲಹೊಂಗಲದಿಂದ ಮಹಾಂತೇಶ ದೊಡ್ಡಗೌಡರ್ 54 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಿತ್ತೂರಿನಲ್ಲಿ ನಾನಾಸಾಹೇಬ್ ಪಾಟೀಲ್ 17 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ 71 ಮತಗಳಿಂದ ಆಯ್ಕೆಯಾಗಿದ್ದಾರೆ. ಹುಕ್ಕೇರಿಯಿಂದ ರಮೇಶ ಕತ್ತಿ 59 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಈ ಸಂದರ್ಭದಲ್ಲಿ ನಿಪ್ಪಾಣಿ ನಿರ್ದೇಶಕ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, “ಹೈಕೋರ್ಟ್ ಆದೇಶದಂತೆ ಇಂದು ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಮತಕ್ಷೇತ್ರಗಳ ಫಲಿತಾಂಶ ಈಗ ಬಂದಿದೆ. ಇನ್ನೂ 15 ದಿನಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ನಡೆಯಲಿದೆ. ನಾನು ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದೇವೆ. ನಾವೆಲ್ಲರೂ ಜಾರಕಿಹೊಳಿ ಸಹೋದರರ ಬಣದಲ್ಲಿ ಇದ್ದೇವೆ. ಬಾಲಚಂದ್ರ ಮತ್ತು ಸತೀಶ್ ಜಾರಕಿಹೊಳಿ ಅವರ ಜೊತೆ ಚರ್ಚಿಸಿ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ,” ಎಂದರು.
ಬೈಲಹೊಂಗಲ ನಿರ್ದೇಶಕ ಮಹಾಂತೇಶ ದೊಡ್ಡಗೌಡರ್ ಪ್ರತಿಕ್ರಿಯಿಸಿ, “ಚುನಾವಣೆಯಲ್ಲಿ ನಾನು ಅಧಿಕೃತವಾಗಿ ಗೆಲುವು ಸಾಧಿಸಿದ್ದೇನೆ. ಕಿತ್ತೂರಿನ ಸೋಲಿಗೆ ಯಾವುದೇ ಅಸಮಾಧಾನ ಇಲ್ಲ. ನಾನು ಅಣ್ಣಾಸಾಹೇಬ್ ಜೊಲ್ಲೆ ಅವರೊಂದಿಗೆ ಇದ್ದೇನೆ. ಕೆಲವರು ಕಿತ್ತೂರು ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಅದರಿಂದ ಸೋಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಸುಮಾರು 16 ಮಂದಿ ಆಕಾಂಕ್ಷಿಗಳಿದ್ದಾರೆ. ನಾನೂ ಪರೋಕ್ಷವಾಗಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ,” ಎಂದಿದ್ದಾರೆ.
ಕಿತ್ತೂರು ನಿರ್ದೇಶಕ ನಾನಾಸಾಹೇಬ್ ಪಾಟೀಲ್ ಮಾತನಾಡಿ, “17 ಮತಗಳಿಂದ ಗೆಲುವು ಸಾಧಿಸಿದ್ದೇನೆ. 32 ಮತಗಳಲ್ಲಿ 15 ಮತಗಳು ವಿರೋಧಿಗಳಿಗೆ ಬಿದ್ದವು. ಒಂದು ಮತವೂ ಅಡ್ಡ ಮತದಾನವಾಗಿಲ್ಲ. 7 ಜನರು ನಮ್ಮ ಪರ ಅಡ್ಡ ಮತದಾನ ಮಾಡಿದ್ದಾರೆ. ಯುದ್ಧದಲ್ಲಿ ಹತರಾಗುವುದಕ್ಕಿಂತ ಚಾಕು ತರಬೇಕು. ನಾವು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ನಡೆಸಿದ್ದೇವೆ. ನಾವು ಯಾವ ಪರಿಸ್ಥಿತಿಯಲ್ಲಾದರೂ ಸತೀಶ್ ಜಾರಕಿಹೊಳಿ ಪರವಾಗಿದ್ದೇವೆ,” ಎಂದು ತಿಳಿಸಿದ್ದಾರೆ.






