ಗೋವಾ: ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವಕನೋರ್ವನಿಗೆ, ಯುವತಿಯೊಬ್ಬಳು ಕನ್ನಡದಲ್ಲೇ ಖಡಕ್ಕಾಗಿ ಉತ್ತರಿಸಿ ತರಾಟೆಗೆ ತೆಗೆದುಕೊಂಡ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ದೃಶ್ಯದಲ್ಲಿ ಕಾಣುವಂತೆ ಪ್ರವಾಸಿ ಬೋಟ್‌ವೊಂದರಲ್ಲಿ ಕುಳಿತಿದ್ದ ಯುವತಿಗೆ, ಪಕ್ಕದ ಬೋಟ‌್‌ನಲ್ಲಿದ್ದ ಯುವಕ “ಹಿಂದಿ ಬೋಲ್…ಹಿಂದಿ” ಎನ್ನುತ್ತಾ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಯುವಕನ ಮಾತಿಗೆ ಕ್ಯಾರೆ ಎನ್ನದ ಕೆಚ್ಚೆದೆಯ ಕನ್ನಡತಿ, “ನಾನ್ಯಾಕೆ ಹಿಂದಿ ಮಾತನಾಡಬೇಕು?, ನೀನು ಕನ್ನಡ ಮಾತಾಡು” ಎಂದು ತಿರುಗಿ ಪ್ರಶ್ನಿದ್ದಾಳೆ. ಆಗ ಯುವಕ ನೀನು ನಮ್ಮ ಸ್ಥಳದಲ್ಲಿದ್ದೀಯಾ ಎಂದು ಬೆದರಿಕೆ ಒಡ್ಡಿದರೂ ಸಹ ತಲೆಕೆಡಿಸಿಕೊಳ್ಳದ ಯುವತಿ “ನೀನು ಯಾವೋನಾದರೆ ನನಗೇನು?” ಎಂದಿದ್ದಾಳೆ.
ಯಾವಾಗ ಯುವತಿ ಬೆದರಿಕೆಗೂ ಹೆದರದೇ ತಿರುಗಿ ಉತ್ತರ ನೀಡಿದಳೋ ಆಗ ಯುವಕ ಬೇರೆ ದಾರಿ ಕಾಣದೇ “ಬೋಲೋ ವಂದೇ ಮಾತರಂ” ಎಂದು ಹೇಳಿದ್ದಾನೆ. ಅದಕ್ಕೂ ಪ್ರತ್ಯುತ್ತರ ನೀಡಿದ ಯುವತಿ “ಹಿಂದಿಯಲ್ಲಿ ನೀನು ಬೋಲೋ ವಂದೇ ಮಾತರಂ ಅಂದ್ರೆ ನಾನ್ಯಾಕೆ ಹೇಳಬೇಕು? ನೀನೂ ಕಾಸ್ ಕೊಟ್ಟು ಬೋಟಲ್ಲಿ ಕೂತಿದೀಯಾ, ನಾನು ಕಾಸು ಕೊಟ್ಟೇ ಕೂತಿದೀನಿ” ಎಂದು ಆವಾಜ್ ಹಾಕಿದ್ದಾಳೆ. ಕೊನೆಗೆ ಯುವಕ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾನೆ.
ಈ ಘಟನೆಯ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರ ಕನ್ನಡ್ವಿರಾಟ @kohlificationn ಎಂಬುವವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಗೋವಾದಲ್ಲಿ ನಡೆದಿದ್ದು ಎನ್ನಲಾಗಿದೆ. ವೀಡಿಯೋ ನೋಡಿದ ಕನ್ನಡಿಗರು ಯುವತಿಯ ದಿಟ್ಟತನವನ್ನು ಮೆಚ್ಚುಕೊಂಡು ಕನ್ನಡನಾಡಿನ ವೀರವನಿತೆ ಎಂದು ಕೊಂಡಾಡಿದ್ದಾರೆ.






