ಶಿರಸಿ: ತಾಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾಗಿದ್ದ ಕು. ಗೀತಾ ಭೋವಿ ಭಾನುವಾರ ಹೃದಯಾಘಾತದಿಂದ ನಿಧನರಾದರು. ಈ ಹಿನ್ನಲೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಮ್ಮ ಇಂದಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮನೆಗೆ ಹಿಂದಿರುಗಿದ್ದರು. ಆದರೆ ಇಂದು ಬೆಳಗಿನ ಜಾವ ಏಕಾಏಕಿ ಹೃದಯಾಘಾತ ಉಂಟಾಗಿ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದ ಗೀತಾ ಭೋವಿ, ಶಾಸಕ ಭೀಮಣ್ಣ ನಾಯ್ಕರವರ ಕಟ್ಟಾ ಅಭಿಮಾನಿಯಾಗಿದ್ದರು. ತಮ್ಮ ರಾಜಕೀಯ ಬದುಕಿನಲ್ಲಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡು ಇಟಗುಳಿ ಪಂಚಾಯಿತಿ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.
ಗೀತಾ ಭೋವಿ ಅವರ ನಿಧನಕ್ಕೆ ಶಾಸಕ ಭೀಮಣ್ಣ ಟಿ.ನಾಯ್ಕ ಸಂತಾಪ ವ್ಯಕ್ತಪಡಿಸಿ, “ಪಕ್ಷವು ಒಬ್ಬ ನಿಷ್ಠಾವಂತ ಕಾರ್ಯಕರ್ತೆಯನ್ನು ಕಳೆದುಕೊಂಡಿದೆ. ಅವರು ಪಕ್ಷಕ್ಕೂ ಜನರಿಗೂ ನೀಡಿದ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ,” ಎಂದು ತಿಳಿಸಿದ್ದಾರೆ. ಕಾರ್ಯಕರ್ತೆ ಮೃತರಾದ ಹಿನ್ನಲೆ ಇಂದು ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಭೀಮಣ್ಣ ನಾಯ್ಕ ರದ್ದುಗೊಳಿಸಲು ತಿಳಿಸಿದ್ದಾರೆ.






