ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಇರುವಂತೆಯೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಸ್ಥಾನದ ಮೇಲೆಯೂ ಹಲವು ಹಿರಿಯ ನಾಯಕರ ಕಣ್ಣು ಬಿದ್ದಿದೆ. ಹಾಲಿ ಅಧ್ಯಕ್ಷರ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳು ರೇಸ್‌ಗೆ ಇಳಿದಿದ್ದು, ದಿನೇ ದಿನೇ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ.
KPCC ಅಧ್ಯಕ್ಷ ಪಟ್ಟಕ್ಕಾಗಿ ಪ್ರಬಲವಾಗಿ ಸಚಿವರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದಾರೆನ್ನಲಾಗುತ್ತಿದೆ. ಈ ನಡುವೆ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್ ಹೆಸರುಗಳು ಕೂಡ ಇದೀಗ ಮುನ್ನೆಲೆಗೆ ಬಂದಿದೆ.
ಆಕಾಂಕ್ಷಿಗಳ ಪಟ್ಟಿ ವಿಸ್ತರಣೆ: ಇನ್ನು, ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಕೆ.ಎನ್. ರಾಜಣ್ಣ ಅವರು ಕೂಡಾ ಬಹಿರಂಗವಾಗಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. “ನನಗೂ KPCC ಅಧ್ಯಕ್ಷ ಸ್ಥಾನ ನೀಡಿ” ಎಂದು ಅವರು ವರಿಷ್ಠರ ಬಳಿ ಬೇಡಿಕೆ ಇಟ್ಟಿದ್ದಾರೆ.
ಪಕ್ಷದ ನಿಯಮದ ಪ್ರಕಾರ, ಹಾಲಿ ಅಧ್ಯಕ್ಷರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಾಗ ಹೊಸ ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗುತ್ತದೆ. ಇತ್ತೀಚಿಗೆ, ನವೆಂಬರ್ ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಗಾದಿಗೆ ಏರುತ್ತಾರೆ ಎಂಬ ಗಾಳಿ ಸುದ್ದಿಯಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಶುರುವಾಗಿದೆ.






