ಪುಣೆ: ಉದ್ಯೋಗದ ಆಮಿಷವೊಡ್ಡಿ ಹಣ ಲೂಟಿ ಮಾಡುವ ಸೈಬರ್ ವಂಚನೆಗಳು ದಿನೇ ದಿನೇ ವಿಕೃತ ರೂಪ ಪಡೆದುಕೊಳ್ಳುತ್ತಿದ್ದು, ಪುಣೆಯಲ್ಲಿ ಗುತ್ತಿಗೆದಾರರೊಬ್ಬರು ಅತ್ಯಂತ ವಿಚಿತ್ರವಾದ ಮದರ್‌ಹುಡ್ ಜಾಬ್ ಸ್ಕ್ಯಾಮ್ ಗೆ ಸಿಲುಕಿ ಬರೋಬ್ಬರಿ ₹11 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋವನ್ನು ನೋಡಿ ಗುತ್ತಿಗೆದಾರರು ಈ ವಂಚಕರ ಜಾಲಕ್ಕೆ ಬಿದ್ದಿದ್ದಾರೆ. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು “ತಮ್ಮನ್ನು ತಾಯಿ ಮಾಡುವ ಗಂಡಸು ಬೇಕು, ಅದಕ್ಕೆ ₹25 ಲಕ್ಷ ಸಂಭಾವನೆ ನೀಡುತ್ತೇವೆ” ಎಂದು ಹೇಳಿಕೊಂಡಿದ್ದರು.
ಪ್ರಾರಂಭದಲ್ಲಿ ಅನುಮಾನವಿದ್ದರೂ, ದೊಡ್ಡ ಮೊತ್ತದ ಹಣದ ಆಸೆಗೆ ಬಿದ್ದ ಗುತ್ತಿಗೆದಾರರು ವಿಡಿಯೋದಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ.
‘ಪ್ರೆಗ್ನೆಂಟ್ ಜಾಬ್ ಕಂಪನಿ ಅಸಿಸ್ಟೆಂಟ್’ ಮಾತು! ಕರೆ ಸ್ವೀಕರಿಸಿದ ಮತ್ತೊಬ್ಬ ವ್ಯಕ್ತಿ ತಾನು ಪ್ರೆಗ್ನೆಂಟ್ ಜಾಬ್ ಕಂಪನಿ ಅಸಿಸ್ಟೆಂಟ್‘ ಎಂದು ಪರಿಚಯಿಸಿಕೊಂಡು, ಈ ಕೆಲಸಕ್ಕೆ ನಿಯಮಗಳು ಮತ್ತು ನೋಂದಣಿ ಶುಲ್ಕಗಳಿವೆ ಎಂದು ನಂಬಿಸಿದ್ದಾನೆ. ಮೊದಲು ಕಂಪನಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು, ನಂತರ ಐಡಿ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತದೆ, ಎಂದು ಭರವಸೆ ನೀಡಲಾಗಿದೆ.
ಗುತ್ತಿಗೆದಾರರು ಇದನ್ನು ನಂಬಿದ ಕೂಡಲೇ ವಂಚಕರು ತಮ್ಮ ಕೈಚಳಕವನ್ನು ತೋರಿಸಲು ಆರಂಭಿಸಿದ್ದಾರೆ. ನೋಂದಣಿ ಶುಲ್ಕ, ಐಡಿ ಕಾರ್ಡ್ ವೆಚ್ಚ, ವೆರಿಫಿಕೇಶನ್ ಫೀ, ಜಿಎಸ್‌ಟಿ, ಟಿಡಿಎಸ್, ಪ್ರೊಸೆಸಿಂಗ್ ಶುಲ್ಕ ಹೀಗೆ ನೂರಕ್ಕೂ ಹೆಚ್ಚು ಬಾರಿ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ವರ್ಗಾಯಿಸಲು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ 23ರವರೆಗೆ, ಗುತ್ತಿಗೆದಾರರು ಒಟ್ಟು ₹11 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಠಾಣಾ ಮೆಟ್ಟಿಲೇರಿದ ಪ್ರಕರಣ ವಂಚನೆಗೊಳಗಾಗಿರುವ ಬಗ್ಗೆ ಅರಿವಾದ ಕೂಡಲೇ ಗುತ್ತಿಗೆದಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಚಿತ್ರ ಸ್ಕ್ಯಾಮ್ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಸಾರ್ವಜನಿಕರು ಆನ್‌ಲೈನ್‌ನಲ್ಲಿ ಇಂತಹಾ ಸುಲಭದ ಮತ್ತು ಅಸಹಜ ಉದ್ಯೋಗದ ಆಫರ್‌ಗಳಿಗೆ ಯಾವುದೇ ಕಾರಣಕ್ಕೂ ಹಣ ಪಾವತಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.






