ತೆಲಂಗಾಣ: ರಂಗಾರೆಡ್ಡಿ ಜಿಲ್ಲೆಯ ಚೆವೆಳ್ಳ ತಾಲೂಕಿನ ಮಿರ್ಜಾಗೂಡ ಗ್ರಾಮದ ಬಳಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿದೆ. ಸರ್ಕಾರಿ ಬಸ್ ಹಾಗೂ ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಲಾರಿ ನಡುವಿನ ಭೀಕರ ಅಪಘಾತ ಸ್ಥಳೀಯರನ್ನ ಬೆಚ್ಚಿಬೀಳಿಸಿದೆ.
ಸರ್ಕಾರಿ ಬಸ್‌ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರಿದ್ದರು. ಟಿಪ್ಪರ್ ಲಾರಿ ಅತಿ ವೇಗದಲ್ಲಿ ಬರುತ್ತಿದ್ದಾಗ ಬಸ್‌ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಲಾರಿ ಮಗುಚಿ ಬಸ್‌ನ ಮೇಲೆ ಬಿದ್ದಿದೆ. ಬಸ್ ಸಂಪೂರ್ಣ ಜಲ್ಲಿ ಕಲ್ಲಿನಿಂದ ಮುಚ್ಚಿಹೋಗಿದ್ದು, ಪ್ರಯಾಣಿಕರು ಅದರೊಳಗೆ ಸಿಲುಕಿ ನರಳಾಡುವ ಸ್ಥಿತಿ ನಿರ್ಮಾಣವಾಯಿತು.
ಘಟನೆಯಲ್ಲಿ ಬಸ್ ಚಾಲಕ ಹಾಗೂ ಲಾರಿ ಚಾಲಕ ಸೇರಿದಂತೆ 20 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಹೊರತೆಗೆದು ನೆರವು ನೀಡುವ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.






