ಕಾರವಾರ: ವಯಸ್ಸಾದರೂ ಮದುವೆಯಾಗದೇ ಇರುವುದನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೋರ್ವ ಖಿನ್ನತೆಗೆ ಒಳಗಾಗಿ ತನಗೆ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಮಾರುತಿಗಲ್ಲಿಯ ನಿವಾಸಿ ಪ್ರಜ್ಞೇಶ ಪ್ರಕಾಶ ಶೇಟ್(45) ಆತ್ಮಹತ್ಯೆಗೆ ಯತ್ನಿಸಿದ ಅವಿವಾಹಿತನಾಗಿದ್ದಾನೆ. ಈತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದ್ದು, ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದನೆಂದು ತಿಳಿದುಬಂದಿದೆ.
ವಯಸ್ಸು 45 ಆಗಿದ್ದರೂ, ಇದುವರೆಗೂ ಮದುವೆ ಆಗದಿದ್ದ ಕಾರಣ ಮನನೊಂದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊಟ್ಟೆಗೆ ಚಾಕು ಇರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಆದರೆ ಚಾಕು ಇರಿದುಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಆತನ ಚೀರಾಟ ಕೇಳಿ ಅಕ್ಕಪಕ್ಕದವರು ಧಾವಿಸಿದ್ದಾರೆ. ಈ ವೇಳೆ ಆತ ರಕ್ತಸಿಕ್ತವಾಗಿ ಬಿದ್ದಿದ್ದನ್ನು ಗಮನಿಸಿ, ಮನೆಯವರಿಗೆ ಮಾಹಿತಿ ನೀಡಿ, ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಹಿನ್ನಲೆ ಸದ್ಯ ಪ್ರಜ್ಞೇಶ್ ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕಾರವಾರ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.






