ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೊದಲು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಪೂರ್ಣಗೊಳಿಸಿ, ಆ ಬಳಿಕವಷ್ಟೇ ಸುರಂಗ ರಸ್ತೆಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರಕಾರದ ಸಾಮರ್ಥ್ಯದ ಕುರಿತು ಪ್ರಶ್ನೆ ಎತ್ತಿದ ಆರ್.ಅಶೋಕ್ ಅವರು, “ರಸ್ತೆ ಗುಂಡಿಗಳನ್ನು ಮುಚ್ಚುವ ಟ್ಯಾಲೆಂಟ್ ಈ ಸರ್ಕಾರಕ್ಕಿಲ್ಲ. ಇಂಥವರು ಇನ್ನು ಟನಲ್ ರೋಡ್ ಅನ್ನು ಯಾವ ರೀತಿ ಮಾಡಲು ಸಾಧ್ಯ? ಜೊತೆಗೆ, ಇವರ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಹಣಕಾಸಿನ ಸಂಪನ್ಮೂಲಗಳೇ ಇಲ್ಲ,” ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಈ ಮೂಲಕ ಅವರು ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
”ನಾವು ಅಭಿವೃದ್ಧಿ ವಿರೋಧಿಗಳಲ್ಲ, ಆದರೆ ಸುರಂಗ ರಸ್ತೆ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಬೇರೆ ಜಾಗ ಹುಡುಕಿ,” ಎಂದು ಆರ್. ಅಶೋಕ್ ಅವರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.






