ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ರೂಟರ್‌ನಲ್ಲಿ ಕಾಲು ಸಿಲುಕಿ ರೈತನೊಬ್ಬನ ಕಾಲು ತುಂಡಾದ ಘಟನೆ ನಡೆದಿದೆ.
ಮಲವಳ್ಳಿ ಗ್ರಾಮದ ತುಕಾರಾಂ ಹನುಮಂತಪ್ಪ ಪಾಟೀಲ್ (38) ಎಂಬಾತನೇ ಈ ದುರ್ಘಟನೆಯಲ್ಲಿ ಗಾಯಗೊಂಡವರು. ತಹಶೀಲ್ದಾರ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ತುಕಾರಾಂ, ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ರೂಟರ್‌ನಿಂದ ಕೃಷಿ ಕಾರ್ಯ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ರೂಟರ್‌ನಲ್ಲಿ ಸಿಲುಕಿಕೊಂಡಿತು.
ಕೆಲವೇ ಕ್ಷಣಗಳಲ್ಲಿ ಕಾಲು ನುಜ್ಜುಗುಜ್ಜಾಗಿ ತೀವ್ರ ನೋವಿನಿಂದ ತುಕಾರಾಂ ಗಂಭೀರವಾಗಿ ಬಿದ್ದಿದ್ದರು. ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಅವರನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ SDM ಆಸ್ಪತ್ರೆಗೆ ದಾಖಲಿಸಲಾಗಿದೆ.






