ತಿರುವನಂತಪುರಂ: ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕೆಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿಹಾಕಿದ ಘಟನೆ ವಾರ್ಕಳದ ಬಳಿ ನಡೆದಿದೆ. ರೈಲಿನ ಬಾಗಿಲಿನಲ್ಲಿ ನಿಂತಿದ್ದ ಮಹಿಳೆ ಜಾಗ ಬಿಡಲು ನಿರಾಕರಿಸಿದ್ದರಿಂದ ಕೋಪಗೊಂಡ ಆತ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಪನಚಮೂಡು ಮೂಲದ ಸುರೇಶ್ ಕುಮಾರ್(50) ಎಂಬಾತನನ್ನು ಪೊಲೀಸರು ಆರೋಪಿಯೆಂದು ಗುರುತಿಸಿದ್ದಾರೆ. 20 ವರ್ಷದ ಶ್ರೀಕುಟ್ಟಿ ಪಾಲೋಡ್ ಅವರನ್ನು ರೈಲಿನಿಂದ ತಳ್ಳಿದ ಪ್ರಕರಣದಲ್ಲಿ ಸುರೇಶ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 109 ಅಡಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಸಮಯದಲ್ಲಿ ಶ್ರೀಕುಟ್ಟಿ ಹಾಗೂ ಆಕೆಯ ಸ್ನೇಹಿತೆ ಅರ್ಚನಾ (19) ಅವರು ಅಲುವಾದಿಂದ ತಿರುವನಂತಪುರಂ ಕಡೆ ತೆರಳುತ್ತಿದ್ದ ಕೇರಳ ಎಕ್ಸ್‌ಪ್ರೆಸ್ ರೈಲಿನ ಅನ್ ರಿಸರ್ವ್ಡ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಶ್ರೀಕುಟ್ಟಿ ಬಾಗಿಲಿನಲ್ಲಿ ನಿಂತಿದ್ದಾಗ ಸುರೇಶ್ ಕುಮಾರ್ ಜಾಗ ಬಿಡಲು ಹೇಳಿದ್ದು, ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡು ಆಕೆಯ ಬೆನ್ನಿಗೆ ಕಾಲಿನಿಂದ ಒದ್ದು ರೈಲಿನಿಂದ ತಳ್ಳಿದ್ದಾಗಿ ಹೇಳಲಾಗಿದೆ.
ಆ ಸಂದರ್ಭದಲ್ಲಿ ಅರ್ಚನಾ ಸಹಾಯಕ್ಕೆ ಕಿರುಚಿದಾಗ, ಆರೋಪಿಯು ಆಕೆಯ ಕೈಕಾಲು ಹಿಡಿದು ರೈಲಿನಿಂದ ತಳ್ಳಲು ಯತ್ನಿಸಿದ್ದಾನೆ. ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಅವಳನ್ನು ಎಳೆದು ಮೇಲಕ್ಕೆತ್ತಿದ್ದಾರೆ.
ಅರ್ಚನಾ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸುರೇಶ್ ಕುಮಾರ್ ಮದ್ಯದ ನಶೆಯಲ್ಲಿ ಇದ್ದುದು ದೃಢಪಟ್ಟಿದೆ. ಆತ ಕೊಟ್ಟಾಯಂನಲ್ಲಿ ರೈಲಿಗೆ ಹತ್ತಿದ್ದನು. ಬಳಿಕ ಆತನನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಕೊಚ್ಚುವೇಲಿ ನಿಲ್ದಾಣದಲ್ಲಿ ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.






