ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಹ ಸಿಬ್ಬಂದಿಗೆ ಬಹುನಿರೀಕ್ಷಿತ ಬಡ್ತಿ ಭಾಗ್ಯ ದೊರೆತಿದೆ. ಇಲಾಖೆಯಲ್ಲಿ ಅಗ್ನಿಶಾಮಕ ಹುದ್ದೆಯಲ್ಲಿದ್ದ ನೂರಾರು ಸಿಬ್ಬಂದಿಗೆ ‘ಪ್ರಮುಖ ಅಗ್ನಿಶಾಮಕ (Leading Fireman)’ ಹುದ್ದೆಗೆ ಪದೋನ್ನತಿ ನೀಡಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರ ಕಛೇರಿ, ಬೆಂಗಳೂರು ಆದೇಶ ಹೊರಡಿಸಿದೆ.
ಬಡ್ತಿ ಮಾನದಂಡಗಳೇನು?
ಈ ಪದೋನ್ನತಿಯನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು 2013ರ ಅನ್ವಯ ನೀಡಲಾಗಿದೆ. ಉಳಿದ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ವ್ಯಾಪಿ ಸ್ಥಳೀಯ ವೃಂದದ ಅಗ್ನಿಶಾಮಕ ಮತ್ತು ಸಮಾನಾಂತರ ಹುದ್ದೆಗಳ ಸಿಬ್ಬಂದಿಯನ್ನು ಪರಿಗಣಿಸಲಾಗಿದೆ.
ಪದೋನ್ನತಿ ಪಡೆಯಲು ಇರುವ ಪ್ರಮುಖ ಮಾನದಂಡಗಳೆಂದರೆ:
- 05 ವರ್ಷಗಳ ಅರ್ಹ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು.
- ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಅಥವಾ ಕನ್ನಡ ಭಾಷಾ ಪರೀಕ್ಷೆಯಲ್ಲಿ (ಪ್ರಥಮ ಭಾಷೆ ಕನ್ನಡ) ಉತ್ತೀರ್ಣರಾಗಿರುವುದು ಅಥವಾ ಕೆ.ಪಿ.ಎಸ್.ಸಿ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು.
ಜೇಷ್ಠತೆ (Seniority) ಮತ್ತು ಮೀಸಲಾತಿ ನಿಯಮಗಳನ್ನು ಅನುಸರಿಸಿ ಅರ್ಹ ಸಿಬ್ಬಂದಿಗೆ ಬಡ್ತಿ ನೀಡಲಾಗಿದ್ದು, ಅವರಿಗೆ ನೂತನ ವೇತನ ಶ್ರೇಣಿಯಾಗಿ ರೂ. 44425 ರಿಂದ ರೂ. 83700/- ವರೆಗಿನ ಶ್ರೇಣಿ ಜಾರಿಗೆ ಬರಲಿದೆ.
ಪದೋನ್ನತಿ ಪಡೆದ ಎಲ್ಲಾ ಸಿಬ್ಬಂದಿಗೆ ಅವರ ಹೆಸರಿನ ಮುಂದೆ ನಿರ್ದಿಷ್ಟಪಡಿಸಿದ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಈ ಬಡ್ತಿ ಪ್ರಕ್ರಿಯೆಯಿಂದಾಗಿ ಇಲಾಖೆಯು ಇನ್ನಷ್ಟು ದಕ್ಷತೆ ಮತ್ತು ನೈತಿಕ ಸ್ಥೈರ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







