ಕಲಬುರಗಿ: ತಂಗಿಯೊಂದಿಗೆ ಅತಿಯಾದ ಸಲುಗೆ ಮತ್ತು ಆಕೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಗೆಳೆಯನನ್ನ ಆಕೆಯ ಸಹೋದರನೇ ಕೊಲೆ ಮಾಡಿರುವ ಭೀಕರ ಘಟನೆ ಕಲಬುರಗಿ ನಗರದ ವಿಜಯ ನಗರ ಬಡಾವಣೆಯಲ್ಲಿ ನಡೆದಿದೆ. ಕೊಲೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಮೃತನನ್ನು 30 ವರ್ಷದ ರಿತೇಶ್ ಎಂದು ಗುರುತಿಸಲಾಗಿದೆ. ರಿತೇಶ್ ವಾಸವಿದ್ದ ಮನೆಯಲ್ಲಿ ಸಚಿನ್ ಎನ್ನುವ ಯುವಕ ಹಾಗೂ ಆತನ ಕುಟುಂಬ ಬಾಡಿಗೆಗೆ ವಾಸವಾಗಿತ್ತು. ಈ ವೇಳೆ ಮನೆ ಮಾಲೀಕ ರಿತೇಶ್, ಬಾಡಿಗೆದಾರ ಸಚಿನ್‌ನ ತಂಗಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಅವರ ಮಾತುಕತೆ ಮತ್ತು ಮೆಸೇಜ್‌ಗಳಿಂದ ಸಚಿನ್ ತೀವ್ರವಾಗಿ ರೊಚ್ಚಿಗೆದ್ದಿದ್ದ.
ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದ ರಿತೇಶ್, ನಿನ್ನೆ(ಸೋಮವಾರ) ಗೆಳೆಯರೊಂದಿಗೆ ಪಾರ್ಟಿಗೆ ಹೋಗಿದ್ದ. ಪಾರ್ಟಿ ಮುಗಿಸಿ ರಿತೇಶ್ ತನ್ನ ಮನೆಗೆ ಮರಳಿದರೆ, ಸಚಿನ್ ತನ್ನ ಸ್ನೇಹಿತರೊಂದಿಗೆ ಬೇರೆ ಸ್ಥಳಕ್ಕೆ ಹೋಗಿದ್ದ.
ತಡರಾತ್ರಿ ಸಚಿನ್ ಮನೆಗೆ ಬಂದಾಗ, ರಿತೇಶ್ ಹೊರಗಡೆ ನಿಂತಿರುವುದು ಕಂಡು ಆತನ ಕೋಪ ಮತ್ತಷ್ಟು ಹೆಚ್ಚಾಯಿತು. ರೊಚ್ಚಿಗೆದ್ದ ಸಚಿನ್, ತನ್ನ ಗೆಳೆಯ ಶ್ರೀಕಾಂತನ ಜೊತೆ ಸೇರಿ ರಿತೇಶ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ. ರಿತೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಹೋದರಿಯೇ ಪ್ರಮುಖ ಸಾಕ್ಷಿ:
ಈ ಮರ್ಡರ್ ಮಿಸ್ಟರಿಯನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ಆಧಾರ ಒದಗಿಸಿದ್ದು ಸ್ವತಃ ಆರೋಪಿ ಸಚಿನ್‌ನ ಸಹೋದರಿ. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಆರ್ ಜಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಚಿನ್ ಮತ್ತು ಆತನ ಗೆಳೆಯ ಶ್ರೀಕಾಂತನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ, ಮರ್ಡರ್ ಮಿಸ್ಟರಿಯನ್ನು ಭೇದಿಸಿದ ಆರ್ ಜಿ ನಗರ ಠಾಣೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.






