ಹಾಸನ: ಹಾಸನ (Hassan) ಜಿಲ್ಲೆಯ ಅರಸೀಕೆರೆಯ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಅಕ್ರಮ ಮದ್ಯದ (Liquor) ಮಾರಾಟದಿಂದಾಗಿ ಎರಡು ತಿಂಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮದ್ಯದ ಅಂಗಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದ ಕೆಲ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಮದ್ಯ ಸೇವನೆಯಿಂದ ಕಳೆದ ಎರಡು ತಿಂಗಳಲ್ಲಿ ತೀರ್ಥಕುಮಾರ್ (40), ಗಿರೀಶ್ (41), ಶಾಂತಲಿಂಗಯ್ಯ (45), ಬಸವಲಿಂಗಪ್ಪ (55), ರೇಣುಕಯ್ಯ (45), ಸಿದ್ದಲಿಂಗಯ್ಯ (50) ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.
ಮದ್ಯ ಸೇವನೆಗೆ ದಾಸರಾದ ಯುವಕರು ಹಾಗೂ ಕಾರ್ಮಿಕರು ದಿನನಿತ್ಯದ ಆದಾಯವನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಬೇಸತ್ತ ಮಹಿಳೆಯರು ಮತ್ತು ಮಕ್ಕಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.






